ಕುಷ್ಟಗಿ ತಾಲೂಕು ಹಾಲುಮತ ಸಮಾಜದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ, ಸಂಸದ ರಾಜಶೇಖರ್ ಹಿಟ್ನಾಳ್, ಶಿವಾನಂದಯ್ಯ ಗುರುವಿನ್, ಶರಣಯ್ಯ ಗುರುವಿನ್, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಣ್ಣ ಪಲ್ಲೇದ್ ಇತರರಿದ್ದರು. 
ಕೊಪ್ಪಳ

ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೊಡ್ಡನಗೌಡ ಪಾಟೀಲ್ ಸಲಹೆ
  • ಕುಷ್ಟಗಿ ಪ್ರತಿಭಾ ಪುರಸ್ಕಾರ ಸಮಾರಂಭ
ಕುಷ್ಟಗಿ: ಮಕ್ಕಳು ಉನ್ನತ ಹುದ್ದೆ ಪಡೆಯುವ ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಂಡು ಪಾಲಕರ, ಶಿಕ್ಷಕರ ಹಾಗೂ ಸಮಾಜದ ಕೀರ್ತಿ ಹೆಚ್ಚಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಇಲ್ಲಿನ ಕೊಪ್ಪಳ ರಸ್ತೆಯ ಎನ್.ಸಿ.ಎಚ್.ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಏನೇ ಸಮಸ್ಯೆ ಬಂದರೂ ಸರಿದೂಗಿಸುವ ಕೆಲಸ ಹಾಲುಮತ ಸಮಾಜದಲ್ಲಾಗಬೇಕು. ಶೈಕ್ಷಣಿಕವಾಗಿ ಸಮಾಜ ಮುನ್ನೆಲೆಗೆ ಬರಬೇಕಿದೆ.
ಪಟ್ಟಣದಲ್ಲಿ ಕನಕಭವನ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳ್ಳಲು ಇನ್ನೂ 7ಕೋಟಿ ರೂ.ಬೇಕಾಗುತ್ತದೆ. ಕನಕ ಭವನ ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದ್ದು, ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಸಮಾಜದಲ್ಲಿ ಸಂಘಟಿತರಾದಲ್ಲಿ ಯಾವ ಸಾಧನೆ ಬೇಕಾದರೂ ಮಾಡಬಹುದು. ನಮ್ಮಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಇನ್ನು ಮುಂದೆ ಬರಬೇಕಿದೆ. ಮಕ್ಕಳು ತಮ್ಮ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಭ್ಯಾಸ ಮಾಡಿ ಒಳ್ಳೆಯ ಅಂಕ ಪಡೆದು, ಉನ್ನತ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಬೇಕು. ಪಟ್ಟಣದ ಕನಕ ಭವನಕ್ಕೆ 25 ಲಕ್ಷ ರೂ. ಅನುದಾನ ನೀಡಲಾಗವುದು ಎಂದು ಭರವಸೆ ನೀಡಿದರು.
ಉಪನ್ಯಾಸಕ ನಿಂಗಪ್ಪ ಕಂಬಳಿ, ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದಪ್ಪ ಗುಡಿಮನಿ, ಸಿಆರ್‌ಪಿ ಶರಣಪ್ಪ ತಮ್ಮಿನಾಳ್, ರಾಜ್ಯ ಹಿಂದುಳಿದ ವರ್ಗದ ಆಯೋಗದ ಸದಸ್ಯೆ ಲಕ್ಷ್ಮೀ ಪಾಟೀಲ್, ಯುವ ಘಟಕದ ತಾಲೂಕು ಅಧ್ಯಕ್ಷ ಕಲ್ಲೇಶ ತಾಳದ್, ವಕೀಲ ಯಮನೂರಪ್ಪ ಪೂಜಾರ, ಪ್ರಮುಖರಾದ ಹೊಳಿಯಪ್ಪ ಕುರಿ, ಫಕೀರಪ್ಪ ಚಳಗೇರಿ, ಹನುಮಂತಪ್ಪ ಚೌಡ್ಕಿ, ಬೀರಪ್ಪ ಅಂಡಗಿ ಇನ್ನಿತರರಿದ್ದರು.