ಅಂಜನಾದ್ರಿ ಶ್ರೀ ಆಂಜನೇಯ ದೇವಾಲಯಕ್ಕೆ ನೀಡಿರುವ ಸ್ವರ್ಣಾಭರಣಗಳಿಗೆ ಸಂಬಂಧಿಸಿದ ದಾಖಲೆ ಮತ್ತು ದೃಢೀಕರಣ ಪತ್ರಗಳನ್ನು ಗಂಗಾವತಿ ತಹಸೀಲ್ದಾರ್ ಯು.ವಸಂತಕುಮಾರಿಗೆ ತಯಾರಕ ಗುಂಡಾಚಾರಿ ಸ್ಥಪತಿ ನೇತೃತ್ವದ ಮೌಲ್ಯಮಾಪನ ತಂಡ ಬುಧವಾರ ಹಸ್ತಾಂತರಿಸಿತು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ಶಿರಸ್ತೇದಾರ್ ಪ್ರಕಾಶ ನಾಯ್ಕ, ಸರ್ಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲ್ಕುಂದಿ ಇತರರಿದ್ದರು.
- ತಯಾರಕ, ಸ್ಥಳೀಯ ಅಕ್ಕಸಾಲಿಗರ ಸಮ್ಮುಖದಲ್ಲಿ ಆಭರಣ ಶುದ್ಧತೆ-ತೂಕ ಪರಿಶೀಲನೆ
- ಅಗತ್ಯ ದಾಖಲೆ ಆಧಾರದಡಿ ದೇಣಿಗೆ ಸಾಮಗ್ರಿ ಸ್ವೀಕರಿಸಿದ ತಾಲೂಕು ಆಡಳಿತ
- ಅಪರಂಜಿ ಚಿನ್ನದ ಹುಡುಕಾಟ ಕೈಬಿಟ್ಟು ಯಥಾಸ್ಥಿತಿಯಲ್ಲೇ ಖಜಾನೆಗೆ ರವಾನೆ
ಗಂಗಾವತಿ: ತಾಲೂಕಿನ ಅಂಜನಾದ್ರಿ ಶ್ರೀ ಆಂಜನೇಯಸ್ವಾಮಿ ದೇಗುಲಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ, ಉದ್ಯಮಿ ಮಹೇಶ ರೆಡ್ಡಿ ಸಮರ್ಪಿಸಿರುವ 2.5 ಕೋಟಿ ರೂ.ಮೌಲ್ಯದ ಚಿನ್ನಾಭರಣಗಳ ಶುದ್ಧತೆಗೆ ಸಂಬಂಧಿಸಿ ಎದ್ದಿದ್ದ ವಿವಾದಕ್ಕೆ ಬುಧವಾರ ತೆರೆ ಎಳೆಯುವ ಪ್ರಯತ್ನವನ್ನು ಮಾಡುವ ಮೂಲಕ ತಾಲೂಕು ಆಡಳಿತ ಅನುಮಾನಗಳನ್ನು ಮುಂದುವರಿಸುವಂತೆ ಮಾಡಿದೆ. ಆಭರಣಗಳ ತಯಾರಕ ಗುಂಡಾಚಾರಿ ಸ್ಥಪತಿ ನೀಡಿರುವ ದಾಖಲೆಗಳ ಆಧಾರದಡಿ ಪ್ರಕರಣವನ್ನು ದೇವಾಲಯ ಸಮಿತಿ ಸದ್ಯಕ್ಕೆ ಇತ್ಯರ್ಥಗೊಳಿಸಿ ಕೈತೊಳೆದುಕೊಳ್ಳುವ ಕೆಲಸ ಮಾಡಿದೆ.
ಹೈದರಾಬಾದ್ ಮೂಲದ ಎಎಂಆರ್ ಗ್ರೂಪ್ ಮಾಲೀಕ ಡಾ.ಎ. ಮಹೇಶರೆಡ್ಡಿ, 1400 ಗ್ರಾಂ ಚಿನ್ನ ಬಳಸಿದ ಪ್ರಭಾವಳಿ, ಗಧೆ, ಕಿರೀಟ, ಛತ್ರಿ, ಶಂಖ, ಚಕ್ರ, ಸೂರ್ಯ-ಚಂದ್ರ ಪದಕಗಳು, ಧ್ವಜ ಹಾಗೂ ಚಾಮರಗಳನ್ನು ತಾಲೂಕಿನ ಅಂಜನಾದ್ರಿಯ ಆಂಜನೇಯಗೆ ಈಚೆಗೆ ಸಮರ್ಪಿಸಿದ್ದರು. ಇವುಗಳ ತಯಾರಿಕಾ ಪ್ರಕ್ರಿಯೆಯಲ್ಲಿ 120 ಗ್ರಾಂ ವೇಸ್ಟೇಜ್ ತೆಗೆದು ಉಳಿದಿದ್ದು 1280 ಗ್ರಾಂ ಸ್ವರ್ಣಾಭರಣ ಎಂದು ತಿಳಿಸಲಾಗಿತ್ತು.
ದೇವರಿಗೆ ಸಮರ್ಪಣೆ ನಂತರದಲ್ಲಿ ಸುಪರ್ದಿಗೆ ತೆಗೆದುಕೊಳ್ಳುವ ಮೊದಲು ಎಸಿ ಕ್ಯಾ.ಮಹೇಶ ಮಾಲಗಿತ್ತಿ ನೇತೃತ್ವದ ಲೋಹ ಮತ್ತು ಮೌಲ್ಯಮಾಪನ ತಂಡವು ಪರಿಶೀಲನೆ ನಡೆಸಿತ್ತು. ಆದರೆ ಆ ವೇಳೆ ಉದ್ಯಮಿ ತಿಳಿಸಿದಂತೆ ಅವುಗಳು ಸಂಪೂರ್ಣ ಚಿನ್ನದಿಂದ ತಯಾರಿಸಿದ್ದಲ್ಲ ಎಂಬುದು ಪತ್ತೆಯಾಗಿ ಅದೇ ಮಾಹಿತಿ ಜಿಲ್ಲಾಧಿಕಾರಿಗೆ ತಲುಪಿಸಲಾಗಿತ್ತು. ಈ ವಿಚಾರ ಬಹಿರಂಗಗೊಂಡು ಸಂಚಲನ ಮೂಡಿಸಿತ್ತು. ಪರ ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಗತ್ಯ ದಾಖಲೆ ಮತ್ತು ಚಿನ್ನ ಇರುವುದನ್ನು ದೃಢೀಕರಿಸುವಂತೆ ಉದ್ಯಮಿ ಮತ್ತು ತಯಾರಕರಿಗೆ ನೋಟಿಸ್ ಜಾರಿ ಮಾಡಿತ್ತು. ತಯಾರಕ ಆದೋನಿ ದೇವಸ್ಥಾನ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ನೇತೃತ್ವದ ತಂಡ ತಾಲೂಕಾಡಳಿತ ಕಚೇರಿಗೆ ಬುಧವಾರ ಆಗಮಿಸಿ ಆಭರಣಗಳ ತಯಾರಿಕೆ ಮತ್ತು ಚಿನ್ನದ ಮೌಲ್ಯ ಕುರಿತು ವಿವರಣೆ ನೀಡಿದೆ.
ಬಿಲ್ ಪಾವತಿ, ತಯಾರಿಕೆ ವಿನ್ಯಾಸದ ದೃಢೀಕರಣ ಪತ್ರವನ್ನು ತಹಸೀಲ್ದಾರ್ ಯು.ವಸಂತಕುಮಾರಿಗೆ ಸಲ್ಲಿಸಿದೆ. ಇದಲ್ಲದೇ ಈ ನಡುವೆ ಚಿನ್ನ ಲೇಪಿತವಾಗಿದ್ದನ್ನು ನಿಖರವಾಗಿ ಅಂದಾಜಿಸಲು ಮತ್ತು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಮೂಲದ ಹಾಲ್‌ಮಾರ್ಕ್ ನೋಂದಾಯಿತ ಜುವೆಲರ್ಸ್ ಸಂಸ್ಥೆಯೊಂದು ತಾಲೂಕು ಆಡಳಿತಕ್ಕೆ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಈ ಕಾಣಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರಕ್ಕೆ ಬರದೇ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಯಿತು.
ಸ್ವರ್ಣದಲ್ಲಿ ಸಿದ್ಧಗೊಳಿಸುವುದು ಅಸಾಧ್ಯ
ಆಭರಣ ತಯಾರಕ ಗುಂಡಾಚಾರಿ ಸ್ಥಪತಿ ಈ ಬಗ್ಗೆ ಪ್ರತಿಕ್ರಿಯಿಸಿ, ದೇವರಿಗೆ ಅಥವಾ ದೇವಸ್ಥಾನಗಳಿಗೆ ಕವಚ ರೂಪದಲ್ಲಿ ತಯಾರಿಸುವ ಆಭರಣಗಳನ್ನು ಅಪರಂಜಿ ಚಿನ್ನದಲ್ಲಿ ತಯಾರಿಸಲು ಸಾಧ್ಯವಿಲ್ಲ. ತಾಮ್ರದ ಆಧಾರದ ಮೇಲೆ ಬಂಗಾರದ ಲೇಪನ ಮಾಡುವ ವಿಧಾನ ಅನುಸರಿಸಬೇಕು. ಅಂಜನಾದ್ರಿಗೆ ನೀಡಿರುವ ಸ್ವರ್ಣಾಭರಣಗಳನ್ನೂ ಇದೇ ವಿಧಾನದಲ್ಲಿ ತಯಾರಿಸಲಾಗಿದೆ. ಸಂಬಂಧಿಸಿದ ಎಲ್ಲ ದಾಖಲೆಗಳು, ಬಾಂಡ್‌ಗಳು ಹಾಗೂ ಶುದ್ಧತೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಕವಚಗಳ ತಯಾರಿಕೆ ವಿಧಾನ, ಅಚ್ಚು, ವಿನ್ಯಾಸ ಹಾಗೂ ಬಂಗಾರ ಲೇಪನದ ತಾಂತ್ರಿಕ ಮಾಹಿತಿ ವಿವರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಹೊಸಪೇಟೆ ಮೌಲ್ಯಮಾಪಕರಾದ ನಾಗರಾಜಾಚಾರಿ, ಗೋಪಾಲಾಚಾರಿ ಸಮಕ್ಷಮದಲ್ಲಿ ಚಿನ್ನದ ಶುದ್ಧತೆ ಮತ್ತು ತೂಕ ಪರಿಶೀಲಿಸಿದ ನಂತರ ತಾಲೂಕಾಡಳಿತವು ಎಲ್ಲ ವಿವರ ಸರಿಯಾಗಿವೆ ಎಂದು ಹಿಂಬರಹ ನೀಡಿ ವಿವಾದದಿಂದ ತನ್ನನ್ನು ತಾನು ಹೊರ ಹಾಕಿಕೊಳ್ಳಲು ಯತ್ನಿಸಿರುವುದಕ್ಕೆ ಯಾರ ಒತ್ತಡ ಕಾರಣ ಎಂಬುದು ಭಕ್ತರಲ್ಲಿ ಸಂಶಯಕ್ಕೆ ದಾರಿ ಮಾಡಿದೆ.
ಈ ಮಧ್ಯೆ ತಯಾರಕರು ಆಭರಣಗಳನ್ನು ಕನಿಷ್ಠ 50 ವರ್ಷ ಬಾಳಿಕೆ ಬರುವಂತೆ ಉನ್ನತ ಮಟ್ಟದಲ್ಲಿ ತಯಾರಿಸಿದ್ದು, ಯಾವುದೇ ಸಮಸ್ಯೆಗಳಿದ್ದರೂ ಮುಂದಿನ 50 ವರ್ಷಗಳವರೆಗೆ ನಿರ್ವಹಿಸಲಾಗುವುದು ಎಂದು ಅಭಯ ನೀಡಿದ್ದಾರೆಂದು ಮೂಲಗಳು ಹೇಳಿವೆ.
ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ಶಿರಸ್ತೇದಾರ್ ಪ್ರಕಾಶ ನಾಯ್ಕ, ಸರ್ಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಶ ಬಲ್ಕುಂದಿ ಸೇರಿ ಮೌಲ್ಯ ಮಾಪನ ತಂಡದ ಸದಸ್ಯರಿದ್ದರು.
ಸ್ವರ್ಣಾಭರಣಗಳ ಬಿಲ್ ಪಾವತಿ, ಮೌಲ್ಯಮಾಪನ ತಂಡದ ವರದಿ, ತಯಾರಕರ ದೃಢೀಕರಣ ಪತ್ರ ಮತ್ತು ಪಂಚನಾಮೆ ವರದಿ ಹಿನ್ನೆಲೆಯಲ್ಲಿ ದೇವರಿಗೆ ಸಮರ್ಪಿಸಿದ ಚಿನ್ನಾಭರಣಗಳನ್ನು ಸ್ವೀಕರಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ಉಪ ಖಜಾನೆಯಲ್ಲಿ ಭದ್ರ ವಾಗಿ ಇರಿಸಲಾಗುವುದು.