ಅಳವಂಡಿ ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ಜೆಡಿಎಸ್ ತಂಡ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿತು. ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುರೇಶ ಬೂಮರಡ್ಡಿ, ಮುಖಂಡರಾದ ಶರಣಪ್ಪ ಜಡಿ, ಈಶಪ್ಪ ಮಾದಿನೂರು, ದೇವಪ್ಪ ಕಟ್ಟಿಮನಿ, ಕರಿಯಪ್ಪ, ವಸಂತ ಹಾಗೂ ಇತರರು ಇದ್ದರು.
ಅಳವಂಡಿ: ಹೊಬಳಿ ವ್ಯಾಪ್ತಿಯ ಬರಪೀಡಿತ ಗ್ರಾಮಗಳಾದ ಹಂದ್ರಾಳ, ಕವಲೂರು, ಅಳವಂಡಿ, ಬೈರಾಪುರ, ಬೋಚನಹಳ್ಳಿ, ಬಿಸರಳ್ಳಿ, ಬೆಟಗೇರಿ, ವದಗನಾಳ ಹಾಗೂ ಹಲಗೇರಿ ಗ್ರಾಮಗಳಿಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು ಹಾಗೂ ಮುಖಂಡರು ಸೋಮವಾರ ಭೇಟಿ ನೀಡಿ, ಪ್ರಸಕ್ತ ಸಾಲಿನ ಬರ ಪರಿಸ್ಥಿತಿಯನ್ನು ಅವಲೋಕಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುರೇಶ ಬೂಮರಡ್ಡಿ ನೇತೃತ್ವದ ತಂಡ ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿತು. ಈ ಸಂದರ್ಭದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ತಂಡದ ಸದಸ್ಯರ ಮುಂದೆ ವಿವರಿಸಿದರು. ಮಳೆ ಕೊರತೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿದ್ದು, ಬಿತ್ತನೆ ಮಾಡಿದ ಬೆಳೆಗಳು ಸಮರ್ಪಕವಾಗಿ ಬೆಳೆಯದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಮಾಡಿರುವ ಖರ್ಚು ಕೂಡ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ವಿ. ಚಂದ್ರಶೇಖರ್, ಆಡಳಿತ ಪಕ್ಷದ ದಪ್ಪಚರ್ಮದ ಸರ್ಕಾರ ಮಳೆ ಬರದೆ ಇಷ್ಟು ದಿನಗಳಾದರೂ ರೈತರ ನೆರವಿಗೆ ಬಂದಿಲ್ಲ. ರೈತರ ಬಗ್ಗೆ ಕನಿಕರವಿದ್ದರೆ ತಕ್ಷಣ ಬರಗಾಲ ಎಂದು ಘೋಷಣೆ ಮಾಡಬೇಕು.
ಈ ಭಾಗದ ಪಕ್ಕದಲ್ಲಿಯೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದೇ ನದಿಯಿಂದ ಕುಕನೂರು, ಗದಗ ಹಾಗೂ ಮುಂಡರಗಿ ತಾಲೂಕುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದರೂ ಈ ಭಾಗದ ನೀರಾವರಿಗೆ ಶಾಸಕರು ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬರದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ತಕ್ಷಣವೇ ಪ್ರತಿ ರೈತರಿಗೆ 25 ಸಾವಿರ ರೂ. ಬೆಳೆ ಹಾನಿ ಪರಿಹಾರ ನೀಡಬೇಕು. ಬೆಳೆ ವಿಮೆ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರ ಸಾಲದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡರಾದ ಶರಣಪ್ಪ ಜಡಿ, ಈಶಪ್ಪ ಮಾದಿನೂರು, ದೇವಪ್ಪ ಕಟ್ಟಿಮನಿ, ವಸಂತ ನಾಗರಹಳ್ಳಿ, ಜಗನ್ನಾಥ ರೆಡ್ಡಿ, ವಸಂತ ಕರಿಗಾರ, ಮಹಮದ್ ಹುಸೇನ್, ಸೋಮನಗೌಡ, ರಮೇಶ, ಮೂರ್ತಯ್ಯ, ಕರಿಯಪ್ಪ ಹಾಲವರ್ತಿ, ಸುರೇಶ, ಭೀಮರೆಡ್ಡಿ, ಶರಣಗೌಡ, ಮಂಜುನಾಥ, ಶಿವಕುಮಾರ, ವೀರೇಶ, ಮಾರುತಿ, ಆಕಾಶ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.