ಕುಷ್ಟಗಿಯ ಬುತ್ತಿ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟಿಸಿದರು. ಎಸಿ ಕ್ಯಾ.ಮಹೇಶ ಮಾಲಗಿತ್ತು, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಉಮಾದೇವಿ ಬಸಾಪುರ ಇದ್ದರು.  
ಕೊಪ್ಪಳ

ಅವಹವಾಲು ಸ್ವೀಕಾರಕ್ಕೆ ಸೀಮಿತವಾಗದಿರಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಸೂಚನೆ
  • ಕುಷ್ಟಗಿಯಲ್ಲಿ ಜನಸ್ಪಂದನ ಕಾರ್ಯಕ್ರಮ
ಕುಷ್ಟಗಿ: ಜನಸ್ಪಂದನ ಕಾರ್ಯಕ್ರಮ ಸಮಸ್ಯೆಗಳಿಗೆ ನೇರ ಸ್ಪಂದಿಸುವ ವೇದಿಕೆಯಾಗಬೇಕೆಂದು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಸಣ್ಣ-ಪುಟ್ಟ ಸಮಸ್ಯೆಗಳಿಗೂ ನಿತ್ಯ ಕಚೇರಿಗೆ ಅಲೆಯಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೇ ಜನರ ಬಳಿ ತೆರಳಿ ಸಮಸ್ಯೆ ಆಲಿಸಿ ಪರಿಹರಿಸಲೆಂದು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾಟಾಚಾರಕ್ಕೆ ಅಹವಾಲು ಸ್ವೀಕರಿಸದೆ ಸಂಯಮದಿಂದ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮಾತನಾಡಿ, ಹಳ್ಳಿ ಸಮಸ್ಯೆ ಹಳ್ಳಿಯಲ್ಲಿಯೇ ಬಗೆಹರಿಯಬೇಕೆಂಬುದು ಜನಸ್ಪಂದನದ ಉದ್ದೇಶ. ಹೀಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಸ್ಥಳೀಯವಾಗಿ ಪರಿಹರಿಸಲು ಯತ್ನಿಸಲಾಗುವುದು. ಕಳೆದ ಸಲ ನಡೆದ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗಿದ್ದ 343ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.

ಭರವಸೆಯಲ್ಲೇ ಕಾಲಹರಣ

ಆರಂಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಅಹವಾಲು ಸ್ವೀಕರಿಸಿದರು. ಮಧ್ಯಾಹ್ನ 1ಕ್ಕೆ ಆಗಮಿಸಿದ ಡಿಸಿ ಸುರೇಶ ಬಿ. ಇಟ್ನಾಳ ಜನರ ಸಮಸ್ಯೆ ಆಲಿಸಿದರು. ಟೆಂಗುಂಟಿ ಕೆರೆ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಹಾರ ನೀಡಿಲ್ಲ ಎಂಬ ಟೆಂಗುಂಟಿ ಗ್ರಾಮದ ರೈತರ ದೂರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವಂತೆ ಕೆಲ ರೈತರು ಮನವಿ ಸಲ್ಲಿಸಿದರು. ಈ ಮೊದಲೇ ಅರ್ಜಿ(ನಮೂನೆ-57) ಸಲ್ಲಿಸಿರಬೇಕು. ಸಾಗುವಳಿ ಚೀಟಿ ನೀಡುವ ಸಂಬಂಧ ಬಗರ್‌ಹುಕುಂ ಕಮಿಟಿ ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪವನ ವಿದ್ಯುತ್ ಶಕ್ತಿ (ವಿಂಡ್ ಪವರ್) ಉತ್ಪಾದನೆ ಹೆಸರಿನಲ್ಲಿ ತಾಲೂಕಿನ ರೈತರ ಜಮೀನು ಖರೀದಿಸುತ್ತಿರುವ ಕಂಪನಿಗಳು, ಖರೀದಿ ಹಾಗೂ ಬಾಡಿಗೆ ಕರಾರು ವಿಚಾರದಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ಈ ಸಂಬಂಧ ದೂರು ಸಲ್ಲಸಿದರೂ ಕ್ರಮ ಕೈಗೊಳ್ಳದ ತಹಸೀಲ್ದಾರ್ ಅಶೋಕ ಶಿಗ್ಗಾವಿ ವಿರುದ್ಧ ಕ್ರಮ ಕೈಗೊಳ್ಳವಂತೆ ರೈತ ಮುಖಂಡ ಅಬ್ದುಲ್ ನಯೀಂ ದೂರಿದರು.
ಕಾನೂನು ಬಾಹಿರವಾಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಸಿ ಮಹೇಶ ಮಾಲಗಿತ್ತಿ ಹೇಳಿದರು. ಲಭ್ಯ ಜಮೀನನ್ನು ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಿ ರುದ್ರಭೂಮಿ ಒದಗಿಸಿಕೊಡುವಂತೆ ತಾಲೂಕಿನ ಜಿ.ಗಂಗನಾಳ ಹಾಗೂ ಹಿರೇಮನ್ನಾಪುರ ಗ್ರಾಮಸ್ಥರು ಒತ್ತಾಯಿಸಿದರು. ಹೀಗೆ ಬಹುತೇಕ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹರಿಸುವ ಭರವಸೆ ನೀಡಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ

ಗದಗ-ವಾಡಿ ರೈಲು ಮಾರ್ಗದ ಟೆಂಗುಂಟಿ ರಸ್ತೆ ಮೇಲೆ ಹಾದು ಹೋಗಿರುವ ಟ್ರ್ಯಾಕ್ ಅಲೈನ್‌ಮೆಂಟ್ ಹಿನ್ನೆಲೆಯಲ್ಲಿ ಹೆಚ್ಚುವರಿ 1.80ಕಿಮೀ. ಭೂಸ್ವಾಧೀನವಾಗಬೇಕಿದೆ. ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ವೇಗ ಹೆಚ್ಚಿಸಬೇಕು. ತಾವರಗೇರಾ ರಸ್ತೆಯಿಂದ ಕಂದಕೂರು ರಸ್ತೆಯ ರೈಲು ನಿಲ್ದಾಣ ವರೆಗಿನ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸುರೇಶ ಇಟ್ನಾಳಗೆ ಮನವಿ ಸಲ್ಲಿಸಿದರು.

ಪುರಸಭೇಲಿ ದುಡ್ಡು ಕೊಟ್ರೆ ಕೆಲಸ!

ಪುರಸಭೆಯಲ್ಲಿ ಸಾರ್ವಜನಿಕ ಕೆಲಸ ವಿಳಂಬವಾಗುತ್ತಿವೆ. ಸಿಬ್ಬಂದಿ ಕೊರತೆ ಇತರ ನೆಪ ಹೇಳಿ ಕಚೇರಿಗೆ ಬರುವ ಸಾರ್ವಜನಿಕರನ್ನು ಸಾಗಹಾಕಲಾಗುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸುವಂತೆ ಪಟ್ಟಣದ ಶಿವಕುಮಾರ ಗಂಧದಮಠ ಎನ್ನುವವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ ಪಾಟೀಲ್, ಪುರಸಭೆಯಲ್ಲಿ ದುಡ್ಡು ಕೊಟ್ರೆ ಕೆಲಸ. ಇಲ್ಲ ಅಂದ್ರೆ ಇಲ್ಲ. ಇದು ಸರಿಹೋಗದೆ ಇದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಉಮಾದೇವಿ ಬಸಾಪುರ ಇದ್ದರು. ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಇದ್ದರು. 200ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು.