ಐಟಿ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಬಿಇಒ ನಟೇಶ ಅವರು ಸೋಮವಾರ ಪುಸ್ತಕಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕ ಶಿವಕುಮಾರ, ಸಹ ಶಿಕ್ಷಕರಿದ್ದರು. 
ಕೊಪ್ಪಳ

ವಿದ್ಯಾರ್ಥಿಗಳಿಗೆ ಐಟಿ ಪಠ್ಯಪುಸ್ತಕಗಳ ವಿತರಣೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್‌ನಿಂದ ನ್ಯಾಯ ಪಡೆದಿದ ಮಕ್ಕಳಿಗೆ ಸಂತಸ
  • ಐಚ್ಛಿಕ ವಿಷಯ ಮುಂದುವರಿಕೆಗೆ ಸೂಚನೆ
  • ಬಿಇಒ ಅವರಿಂದ ಪಠ್ಯಪುಸ್ತಕ ವಿತರಣೆ
ಕನಕಗಿರಿ: ತಾವು ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯ ಮಾಹಿತಿ ತಂತ್ರಜ್ಞಾನ (ಐಟಿ) ಉಳಿಸಿಕೊಳ್ಳಲು ಹೈಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದಿದ್ದ ಇಲ್ಲಿನ ಆದರ್ಶ ಶಾಲೆ ಮಕ್ಕಳಿಗೆ ಇದೀಗ ಶಿಕ್ಷಣ ಇಲಾಖೆಯು ಸೋಮವಾರ ಪಠ್ಯಪುಸ್ತಕಗಳನ್ನು ಒದಗಿಸಿದ್ದು, ಬೋಧಿಸುವಂತೆ ಶಿಕ್ಷಕರಿಗೆ ತಿಳಿಸಿದೆ.
2024-25ನೇ ಸಾಲಿನಲ್ಲಿ ಒಂಬತ್ತನೇ ತರಗತಿಯಲ್ಲಿದ್ದಾಗ ತೃತೀಯ ಭಾಷೆ ಹಿಂದಿ ಬದಲಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎನ್‌ಎಸ್‌ಕ್ಯೂಎಫ್‌ನಡಿ (ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು) ಇನ್‌ಫಾಮೇಷನ್ ಟೆಕ್ನಾಲಜಿ ಆಯ್ಕೆ ಮಾಡಿಕೊಂಡಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಇಷ್ಟು ತಿಂಗಳು ಕಳೆದರೂ ಶಿಕ್ಷಕರು, ಪಠ್ಯಪುಸ್ತಕ ದೊರೆಯದೆ ಮತ್ತು ಅಧಿಕಾರಿಗಳಿಂದಲೂ ಸ್ಪಷ್ಟ ಮಾಹಿತಿ ದೊರೆಯದೆ ಅತಂತ್ರ ಸ್ಥಿತಿಯಲ್ಲಿದ್ದರು. ಹೀಗಾಗಿ 13 ವಿದ್ಯಾರ್ಥಿಗಳು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಮಧ್ಯಂತರ ಆದೇಶವು ಮಕ್ಕಳ ಪರ ಬಂದಿತ್ತು. ಇದು ಮಕ್ಕಳು ಮತ್ತು ಪಾಲಕರ ಸಂತಸಕ್ಕೆ ಕಾರಣವಾಗಿತ್ತು.
ನ್ಯಾಯಾಲಯದ ಮಧ್ಯಂತರ ಆದೇಶದಂತೆ ಐಟಿ ವಿಷಯವನ್ನು ಮುಂದುವರಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಕಲುಬರಗಿ ವಿಭಾಗದ ಅಪರ ಆಯುಕ್ತರು ಡಿಡಿಪಿಐಗೆ ಸೂಚಿಸಿದ್ದರು. ಡಿಡಿಪಿಐ ಅವರು ಕೋರ್ಟ್‌ಮಧ್ಯಂತರ ಆದೇಶ ಮತ್ತು ಮೇಲಧಿಕಾರಿಗಳ ಪತ್ರ ಉಲ್ಲೇಖಿಸಿ ಶಾಲೆಗೆ ಕ್ರಮ ವಹಿಸುವಂತೆ ನೋಟಿಸ್ ನೀಡಿದ್ದರು.

ಸೋಮವಾರ ಐಟಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ಖುದ್ದು ಕ್ಷೇತ್ರ ಶಿಕ್ಷಣಾಧಿಕಾರಿಯೇ ಹಂಚಿಕೆ ಮಾಡಿದ್ದಾರೆ. ಅಲ್ಲದೆ, ಶಾಲೆಯಲ್ಲಿರುವ ಶಿಕ್ಷಕರಲ್ಲಿಯೇ ಪಾಠವನ್ನು ಬೋಧಿಸಿ ಪರೀಕ್ಷೆಗೆ ಸಿದ್ಧಗೊಳಿಸಲು ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಎಲ್ಲ ವಿಷಯಗಳ ಕುರಿತು ನ.1ರಂದು ವಿಜಯವಾಣಿಯಲ್ಲಿ ಮಧ್ಯಂತರ ಆದೇಶದಿಂದ ಸಂತಸ ಶೀರ್ಷಿಕೆಯಡಿ ವಿಸ್ತತ ವರದಿ ಪ್ರಕಟಗೊಂಡಿತ್ತು.

ಐಟಿ ವಿಷಯವನ್ನೇ 10ನೇ ತರಗತಿಯಲ್ಲಿ ಮುಂದುವರಿಸುವಂತೆ 13 ವಿದ್ಯಾರ್ಥಿಗಳು ಮಾತ್ರ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯ ಕಂಡುಕೊಂಡಿದ್ದರು. ಇದರಿಂದ ಕೋರ್ಟ್ ಮೆಟ್ಟಿಲೇರಿದವರಿಗೆ ಮಾತ್ರ ಐಚ್ಛಿಕ ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರಿಸಲಾಗುತ್ತದೆ. ಉಳಿದವರು ಹಿಂದಿಯಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂದು ಮುಖ್ಯಗುರು ಹೇಳಿಕೆ ನೀಡಿದ್ದರು. 
ಆದರೆ, ಸೋಮವಾರದಂದು ಆಸಕ್ತರೆಲ್ಲರಿಗೂ ಅವಕಾಶ ಕಲ್ಪಿಸುವಂತೆ ಮುಖ್ಯಗುರುಗಳಿಗೆ ಮೇಲಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ 30 ವಿದ್ಯಾರ್ಥಿಗಳು ಐಟಿ ವಿಷಯದ ಆಯ್ಕೆ ಮುಂದುವರಿಸಿದ್ದು, ಅವರಿಗೆ ಪಠ್ಯಪುಸ್ತಕವನ್ನು ಹಂಚಿಕೆ ಮಾಡಲಾಗಿದೆ.
"

ನ್ಯಾಯಾಲಯದ ಮೆಟ್ಟಿಲೇರಿದ್ದ 13 ವಿದ್ಯಾರ್ಥಿಗಳ ಜತೆ ಇನ್ನು 17 ವಿದ್ಯಾರ್ಥಿಗಳಿಗೂ ಪ್ರಸಕ್ತ ಶೈಕ್ಷಣಿಕ ಎನ್‌ಎಸ್‌ಕ್ಯೂಎಫ್‌ನಡಿ ಐಟಿ ಮುಂದುವರಿಸಲಾಗುತ್ತದೆ. ಕೆಲವರು ಹಿಂದಿ ಆಯ್ಕೆ ಮಾಡಿಕೊಂಡಿದ್ದಾರೆ. ಐಟಿಗೆ ಇರುವ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತದೆ.