ಮಳೆ ನಡುವೆ ರಾಜೂರು ಗ್ರಾಮದ ರೈತ ಮಹಿಳೆ ಸಫಿಯಾಬೇಗಂ ನದಾಫ್ ಅವರ ಜಮೀನಿಗೆ ಸಚಿವರಾದ ಶಿವರಾಜ ತಂಗಡಗಿ ಹಾಗೂ ಬಸವರಾಜ ರಾಯರಡ್ಡಿ ಭೇಟಿ ನೀಡಿ ಹೆಸರು ಬೆಳೆ ವೀಕ್ಷಿಸಿದರು. ಡಿಸಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ ಮೋಹನರಾಜ್, ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಇತರರಿದ್ದರು.
ಕುಕನೂರು: ಅಕ್ಕಮಹಾದೇವಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕಿಂತ ಅವರ ತತ್ವ, ವಿಚಾರಧಾರೆ ಮತ್ತು ವಚನಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಆದ್ಯತೆ ನೀಡುವುದು ಹೆಚ್ಚು ಅರ್ಥಪೂರ್ಣ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಅಕ್ಕಮಹಾದೇವಿ ಅಕ್ಕನ ಬಳಗ ಸಚಿವರಿಗೆ ಸನ್ಮಾನಿಸಿ, ಮೂರ್ತಿ ನಿರ್ಮಿಸಲು ಮನವಿ ಮಾಡಿದಾಗ ಹೀಗೆ ಪ್ರತಿಕ್ರಿಯೆ ನೀಡಿದರು.
ನಿಜವಾದ ಲಿಂಗಾಯತ ಧರ್ಮದ ತತ್ವವು ಇಷ್ಟಲಿಂಗ ಆರಾಧನೆಗೆ ಮಹತ್ವ ನೀಡುತ್ತದೆ. ಮೂರ್ತಿ ಪೂಜೆಗೆ ಸ್ಥಾನವಿಲ್ಲ. ಆದ್ದರಿಂದ ಮೂರ್ತಿ ನಿರ್ಮಾಣಕ್ಕೆ ವೆಚ್ಚ ಮಾಡುವ ಬದಲು ಅಕ್ಕಮಹಾದೇವಿ ಅವರ ವಚನ, ಜೀವನದರ್ಶನ ಮತ್ತು ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸಲು ಉಪನ್ಯಾಸ, ವಚನ ವಾಚನ, ಅಧ್ಯಯನ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.