ಕುಕನೂರು ತಾಲೂಕಿನ ಇಟಗಿ-ಮಸಬಹಂಚಿನಾಳ ರಸ್ತೆಯ ಸರ್ವೇ ನಂ.87 ಜಮೀನು ಪಕ್ಕದ ರಸ್ತೆಯಲ್ಲಿ ರೈತರು ಧರಣಿ ನಡೆಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಹುಳ್ಳಿ, ತಾಪಂ ಮಾಜಿ ಅಧ್ಯಕ್ಷ ಪ್ರಭುರಾಜ್ ಆಚಾರ್, ಪ್ರಮುಖರಾದ ಶೇಖರಗೌಡ ಹಕ್ಕಂಡಿ, ಹೇಮಣ್ಣ ಯರಾಶಿ, ಉಮೇಶ ವೀರಾಪುರ ಇತರರಿದ್ದರು. 
ಕೊಪ್ಪಳ

ಪವರ್ ಗ್ರಿಡ್ ಕಂಪನಿಯಿಂದ ರೈತರಿಗೆ ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಗ್ರಾಮಗಳ ಕೃಷಿಕರಿಂದ ಧರಣಿ
  • ರೈತರಿಗೆ ಮಾಡುತ್ತಿರುವ ಅನ್ಯಾಯ ನಿಲ್ಲಿಸುವಂತೆ ಒತ್ತಾಯ
ಕುಕನೂರು: ಕೊಪ್ಪಳ-ಗದಗ ಪವರ್ ಗ್ರಿಡ್ ಕಂಪನಿ ರೈತರಿಗೆ ಮಾಡುತ್ತಿರುವ ಅನ್ಯಾಯ ನಿಲ್ಲಿಸುವಂತೆ ಒತ್ತಾಯಿಸಿ ತಾಲೂಕಿನ ಇಟಗಿ-ಮಸಬಹಂಚಿನಾಳ ರಸ್ತೆಯ ಸರ್ವೇ ನಂ.87 ಜಮೀಜು ಪಕ್ಕದಲ್ಲ್ಲಿ ರೈತರು ಶುಕ್ರವಾರ ಧರಣಿ ನಡೆಸಿದರು.
ಇಟಗಿ, ಮನ್ನಾಪೂರ, ಮಸಬಹಂಚಿನಾಳ, ಗಾವರಾಳ, ದ್ಯಾಂಪೂರು ಗ್ರಾಮಗಳಲ್ಲಿ ಪವರ್‌ಗ್ರಿಡ್ ಕಂಪನಿಯಿಂದ ವಿದ್ಯುತ್ ಸಾಗಣೆ ಮಾರ್ಗ ಅಳವಡಿಸಲಾಗುತ್ತಿದೆ. ಇದರಿಂದ ಜಮೀನುಗಳು ಹಾಳಾಗಿ ರೈತರಿಗೆ ತೊಂದರೆಯಾಗುತ್ತಿದೆ. ಮುಂಗಾರು ಬಿತ್ತನೆ ಆರಂಭಗೊಂಡಿದ್ದು, ಬಿತ್ತನೆ ಕಾರ್ಯ ಕಷ್ಟವಾಗುತ್ತಿದೆ. ಜಮೀನಿನಲ್ಲಿರುವ ಬೋರ್‌ವೆಲ್, ಶೆಡ್, ಹಣ್ಣಿನ ಗಿಡಗಳು, ಶ್ರೀಗಂಧ ಗಿಡಗಳು ಹಾಳಾಗಿದ್ದು, ಸೂಕ್ತ ಪರಿಹಾರ ನೀಡಿಲ್ಲ. ಪವರ್ ಗ್ರಿಡ್ ಕಂಪನಿ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾವಾರು ಟವರ್ ನಿರ್ಮಾಣಕ್ಕೆ ಹಣದ ವಿತರಣೆಯಲ್ಲಿ ನಡೆದ ತಾರತಮ್ಯ ಸರಿಪಡಿಸಬೇಕು. ವಿದ್ಯುತ್ ಸಾಗಣೆ ಮಾರ್ಗದ ಕೆಳಗಿನ ಹಾಳಾದ ಗಿಡ-ಮರಗಳು ಹಾಗೂ ತೋಟಗಾರಿಕೆ ಬೆಳೆಗಳ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮೌಲ್ಯ ಮಾಪನ ಮಾಡಿ ದರ ನಿಗದಿಪಡಿಸಬೇಕು.
ದಾಳಿಂಬೆ, ಶ್ರೀಗಂಧ, ತೆಂಗು, ಪೇರಲ, ಕರಿಬೇವು, ನುಗ್ಗೆ ಸೇರಿ ಬಹುವಾರ್ಷಿಕ ಬೆಳೆಗಳಿಗೆ ಹಾಗೂ ತೋಟಗಾರಿಕೆ ಬೀಜೋತ್ಪಾದನೆ ಬೆಳೆಗಳಾದ ಹತ್ತಿ, ಕಲ್ಲಂಗಡಿ, ಕುಂಬಳ, ಮೆಣಸಿನಕಾಯಿ ಇತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪವರ್‌ಗ್ರಿಡ್ ವಿದ್ಯುತ್ ಸರಬರಾಜು ಮಾರ್ಗದ ಕೆಳಗೆ ಕೆಲಸ ಮಾಡುವಾಗ ರೈತರಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಕಾರಿಡಾರ್ ಲೈನ್ ಕೆಳಗೆ ಬರುವ ಜಮೀನಿನ ರೈತರಿಗೆ 2 ಕೋಟಿ ರೂ. ವಿಮೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಹುಳ್ಳಿ, ತಾಪಂ ಮಾಜಿ ಅಧ್ಯಕ್ಷ ಪ್ರಭುರಾಜ್ ಆಚಾರ್, ಪ್ರಮುಖರಾದ ಶೇಖರಗೌಡ ಹಕ್ಕಂಡಿ, ಹೇಮಣ್ಣ ಯರಾಶಿ, ಉಮೇಶ ವೀರಾಪುರ, ಬಸವರಾಜ ಸೋಂಪುರ, ಬಸಪ್ಪ ಮಂಡಲಗೇರಿ, ಬಸನಗೌಡ ಮುದ್ದಾಬಳ್ಳಿ, ರುದ್ರಪ್ಪ ಬೋರಣ್ಣನವರ, ಮಹೇಶ ಹಿರೇಮನಿ, ಈರಯ್ಯ ಕಳ್ಳಿಮಠ, ಭೀಮನಗೌಡ ಹಕ್ಕಂಡಿ, ಮಹೇಶ ದೊಡ್ಡಮನಿ ಇತರರಿದ್ದರು.