ಕೊಪ್ಪಳ ತಾಲೂಕಿನ ಬಗನಾಳ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿಗೆ ರೈತರು ಸಮಸ್ಯೆಗಳ ದರ್ಶನ ಮಾಡಿಸಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ಡಾ.ಸುರೇಶ ಬಿ.ಇಟ್ನಾಳ ಇತರರಿದ್ದರು. 
ಕೊಪ್ಪಳ

ಮಾಲಿನ್ಯ ನಿಯಂತ್ರಿಸದ ಕೈಗಾರಿಗಳು ಶಾಶ್ವತ ಬಂದ್​

ಪ್ರಮುಖ ಮುಖ್ಯಾಂಶಗಳು

  • ಪಿ.ಎಂ.ನರೇಂದ್ರಸ್ವಾಮಿ ಭರವಸೆ
  • ಕಾರ್ಖಾನೆ ಬಾಧಿತ ಗ್ರಾಮಗಳ ಭೇಟಿ
  • ಕೈಗಾರಿಕೆ ಪರ ಎಂದವರಿಗೆ ಜನರ ತರಾಟೆ
ಕೊಪ್ಪಳ :ಒಂದೇ ಭಾಗದಲ್ಲಿ ಸಾಕಫಿ್ಟು ಐರನ್​ ಆ್ಯಂಡ್​ ಸ್ಪಾಂಜ್​ ಕೈಗಾರಿಕೆಗಳು ಬೀಡುಬಿಟ್ಟಿವೆ. ಸಾಕಷ್ಟು ಪರಿಸರ ಹಾನಿಯಾಗಿದೆ. ಸುಧಾರಣೆಗೆ ಸೂಚಿಸಿದರೂ ಎಚ್ಛೇತ್ತುಕೊಂಡಿಲ್ಲ. ಮಾಲಿನ್ಯ ನಿಯಂತ್ರಿಸದ ಕೈಗಾರಿಗಳನ್ನು ಶಾಶ್ವತವಾಗಿ ಮುಚ್ಚಿಸಲಾಗುವುದೆಂದು ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.
ಕಾರ್ಖಾನೆ ಬಾಧಿತ ತಾಲೂಕಿನ ಬಗನಾಳ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು.
 ಇಲ್ಲಿಗೆ ಬರುವ ಮೊದಲು ಮಾಧ್ಯಮ ವರದಿ ಹಾಗೂ ಕೇಂದ್ರ ಮಂಡಳಿಯ ವರದಿ ಗಮನಿಸಿಯೇ ಇಲ್ಲಿಗೆ ಬಂದಿದ್ದೇನೆ. ಈಗಾಗಲೇ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದು, ಉನ್ನತ ಅಧಿಕಾರಿಗಳ ತಂಡವನ್ನು ಪರಿಶೀಲನೆಗೆ ಕಳುಹಿಸಲಾಗಿತ್ತು. ತಂಡದ ವರದಿ ಸಿದ್ಧವಾಗಿದೆ. ನೆಲ, ಜಲ ಹಾಗೂ ವಾಯು ಸಂರಕ್ಷಣೆ ನಮ್ಮ ಪ್ರಮುಖ ಹೊಣೆಗಾರಿಕೆಯಾಗಿದೆ. ಜನರ ಹೋರಾಟದ ಮನಸ್ಥಿತಿ ನಮಗೆ ಅರ್ಥವಾಗಿದೆ. ಮಾಲಿನ್ಯ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಾಲಿನ್ಯ ಇದೇ ರೀತಿ ಮುಂದುವರಿದರೆ ಕಾರ್ಖಾನೆಗಳನ್ನು ಮುಚ್ಚುವ ಕ್ರಮಕ್ಕೂ ಸಿದ್ಧವಿದ್ದೇವೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಹಿರೇಬಗನಾಳ ಗ್ರಾಮಸ್ಥರು ಧೂಳು ಸಮಸ್ಯೆ ಕುರಿತು ಮನವಿ ಮಾಡಿದ್ದು, ಜಿಲ್ಲಾಧಿಕಾರಿಯವರೊಂದಿಗೆ ಗ್ರಾಮಕ್ಕೆ ಬಂದು ವಾಸ್ತವ ಸ್ಥಿತಿ ಪರಿಶೀಲಿಸಲಾಗಿದೆ. ಈ ವಿಷಯವಾಗಿ ಸುಮಾರು 130 ದಿನಗಳಿಂದ ಹೋರಾಟ ನಡೆಯುತ್ತಿದೆ. ವೈಯಕ್ತಿಕ ವಿಚಾರಗಳನ್ನು ಬಿಟ್ಟು ಧೂಳು ಸಮಸ್ಯೆ ಕುರಿತು ಚರ್ಚೆ ಮಾಡಬೇಕು. ಜಿಲ್ಲೆಯಲ್ಲಿ 1996ರಿಂದ ಕಾರ್ಖಾನೆಗಳು ಆರಂಭವಾಗಿದ್ದು, ಈಗ ಸುಮಾರು 25ರಿಂದ 35 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮ ಧೂಳುಮುಕ್ತವಾಗಬೇಕು ಎಂಬುದು ನಮ್ಮ ಉದ್ದೇಶ. ಸರ್ವೆ ನಡೆಸಿ ಜನರಿಗೆ ನ್ಯಾಯ ಒದಗಿಸಬೇಕು. ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಕಾರ್ಖಾನೆ ಸಮಸ್ಯೆ ಗಂಭೀರವಾಗಿದೆ. ಅವರು, ತಮ್ಮ ಲಾಭಕ್ಕಾಗಿ ಕೆಲಸ ಮಾಡಬಹುದು. ಆದರೆ, ಜನರ ಬದುಕು ಹಾಗೂ ಆರೋಗ್ಯ ಮುಖ್ಯ. ಪರಿಸರ, ಭೂಮಿ ಮತ್ತು ಜನರ ಆರೋಗ್ಯಕ್ಕೆ ಸಮಸ್ಯೆ ಉಂಟಾಗಿದೆ. ಹೋರಾಟದಿಂದ ಈ ಸಮಸ್ಯೆ ಎಲ್ಲರ ಗಮನಕ್ಕೆ ಬಂದಿದೆ. ಜನಜಾಗೃತಿ ಹೆಚ್ಚಾದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.
ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, ಬಗನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ಪೈಕಿ ಹಿರೇಬಗನಾಳ ಗ್ರಾಮದಲ್ಲಿ 122 ಜನರಿಗೆ ಶ್ವಾಸಕೋಶ ಸಮಸ್ಯೆ, 49 ಜನರಿಗೆ ಚರ್ಮರೋಗ, 48 ಜನರಿಗೆ ಕಣ್ಣಿನ ಸಮಸ್ಯೆ, 29 ಜನರಿಗೆ ಕ್ಷಯರೋಗ ಹಾಗೂ 3 ಜನರಿಗೆ ಪಾರ್ಶ್ವವಾಯು ಕಂಡುಬಂದಿದೆ ಎಂದು ತಿಳಿಸಿದರು.
ಕೃಷಿಯಲ್ಲಿ ಶೇ.40ರಿಂದ 50 ರಷ್ಟು ಇಳುವರಿ ಕಡಿಮೆಯಾಗಿದೆ. ಪಪ್ಪಾಯಿ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಕುರಿಗಳಲ್ಲಿ ಅಸಾಮಾನ್ಯ ಸಮಸ್ಯೆಗಳು ಕಂಡುಬರುತ್ತಿವೆ. ಪರಿಸರ ಮಂಡಳಿಯಿಂದ 5 ಕಾರ್ಖಾನೆಗಳಿಗೆ ನೋಟಿಸ್​ ನೀಡಲಾಗಿದೆ. ಎಸ್​ಕೆ ಸ್ಟೀಲ್​ ವಿಸ್ತರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದರು.
ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ, ಜಿಲ್ಲಾ ಪಂಚಾಯತ್​ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಗೂಳಪದಪ ಹಲಿಗೇರಿ, ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಕೊಪ್ಪಳ ಜಿಲ್ಲೆಯ ರೈತಪರ ಮತ್ತು ಪರಿಸರ ಹಿತ ರಕ್ಷಣಾ ಹೋರಾಟ ಸಮಿತಿಗಳು ಹಾಗೂ ಹಿರೇಬಗನಾಳ ಗ್ರಾಮಸ್ಥರು, ಮಹಿಳೆಯರು ಇದ್ದರು.

ಲೇಬರ್​ ಕಾಂಟ್ರಾಕ್ಟರ್​ಗೆ ತೀವ್ರ ತರಾಟೆ

ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಹೆಚ್​.ಆರ್​.ಜಿ ಅಲ್ಲಾಯ್ಸ್​ ಕಾರ್ಖಾನೆ ಪರ ವಾದಿಸಲು ಬಂದ ಲೇಬರ್​ ಕಾಂಟ್ರಾಕ್ಟರ್​ ನೇತ್ರಾವತಿ ಹಾಗೂ ಅವರ ತಂಡಕ್ಕೆ ಗ್ರಾಮಸ್ಥರು ಚೀಮಾರಿ ಹಾಕಿ ಅಟ್ಟಾಡಿಸಿದ ಘಟನೆ ನಡೆದಿದೆ.
ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಬರುವುದಕ್ಕಿಂತ ಮುಂಚೆ ಹಿರೇಕಾಸನಕಂಡಿಯ ಹೆಚ್​.ಆರ್​.ಜಿ ಅಲ್ಲಾಯ್ಸ್​ ಕಾರ್ಖಾನೆ ಪರವಾಗಿ ಅಧ್ಯಕ್ಷರ ಬಳಿ ಮಾತನಾಡಲು ಕಾರ್ಖಾನೆಗೆ ಲೇಬರ್​ ನೀಡುವ ಲೇಬರ್​ ಕಾಂಟ್ರಾಕ್ಟರ್​ ನೇತ್ರಾವತಿ ಕಾರ್ಖಾನೆಯಿಂದ ಯಾವುದೇ ಮಾಲಿನ್ಯವಾಗುತ್ತಿಲ್ಲ ಎಂದು ಬಿಂಬಿಸಲು ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರನ್ನು ಕಾರ್ಖಾನೆಯ ಬಸ್​ನಲ್ಲೇ ಕರೆತಂದಿದ್ದರು. ಈ ವೇಳೆ ನೇತ್ರಾವತಿ ಪರಿಸರ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಕಾರ್ಖಾನೆಯಿಂದ ರೋಗರುಜಿನಗಳಿಲ್ಲ, ಕುಡಿಯುವ ನೀರು ಕಲುಷಿತಗೊಂಡಿಲ್ಲ ಹಾಗೂ ಶಾಲಾ-ಗ್ರಾಮಗಳಿಗೆ ಕಂಪನಿ ನೆರವು ನೀಡುತ್ತಿದೆ. ಮಾಲಿನ್ಯದ ದೂರುಗಳು ಆಧಾರರಹಿತ ಎಂದು ಸಮರ್ಥಿಸಿಕೊಂಡಿದ್ದರು.
ಈ ವಿಷಯ ತಿಳಿದ ಹಿರೇಬಗನಾಳದ ಜನರು, ಕಾರ್ಖಾನೆಯ ಹಣದಾಸೆಗೆ ಬಿದ್ದು ಸುಳ್ಳು ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಬೈಗುಳ ಹಾಗೂ ತೀವ್ರ ಪ್ರತಿರೋಧಕ್ಕೆ ಬೆದರಿದ ನೇತ್ರಾವತಿ ಮತ್ತು ಕಾರ್ಮಿಕರ ತಂಡ ಸ್ಥಳದಿಂದ ದಿಕ್ಕಾಪಾಲಾಗಿ ಓಡಿಹೋಯಿತು
"

ಶಾಸಕ ಹೆಚ್​.ಆರ್​. ಗವಿಯಪ್ಪನವರ ಕಾರ್ಖಾನೆಯ ಧೂಳಿನಿಂದ ಹಿರೇಕಾಸನಕಂಡಿಯಲ್ಲಿ ಜನ-ಜಾನುವಾರುಗಳ ಬದುಕು ದುಸ್ತರವಾಗಿದೆ. 2014ರಿಂದ ಮಾಲಿನ್ಯದ ವಿರುದ್ಧ ಹೋರಾಡುತ್ತಿದ್ದರೂ, ಗೂಂಡಾಗಳ ಮೂಲಕ ನಮಗೆ ಬೆದರಿಕೆ ಹಾಕಲಾಗುತ್ತಿದೆ. ಕೃಷಿ ನಾಶವಾಗಿದ್ದು, ಈಗಾಗಲೇ ಪರಿಸರ ಇಲಾಖೆ ಕಾರ್ಖೆನೆಗೆ ಕ್ಲೋಸ್​ ಆರ್ಡರ್​ ನೀಡಿದೆ. ಕೇವಲ ಹಣದ ಆಸೆಗಾಗಿ ಕೆಲವು ಮಹಿಳೆಯರು ಕಾರ್ಖಾನೆ ಪರ ಸುಳ್ಳು ಹೇಳುತ್ತಿದ್ದಾರೆ.

"

2008ರಿಂದ ಕಾರ್ಖಾನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ನನ್ನ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾನೆ, ನನಗೆ ಕಣ್ಣು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಕಾರ್ಖಾನೆ ಬೇಡ, ಬದುಕಲು ಆಗದಿದ್ದರೆ ವಿಷ ಕೊಡಿ.

"

ನೀರು ಕುಡಿದರೂ ಕರಿಬೂದಿ ಬರುತ್ತಿದೆ. ದುಡಿದು ತಿನ್ನಲು ಆಗುತ್ತಿಲ್ಲ. ಕಾರ್ಖಾನೆ ಬಂದ್​ ಮಾಡಬೇಕೆಂದು ಒತ್ತಾಯಿಸಿದರು..

"

ಕಾರ್ಖಾನೆ ಮಾಲಿನ್ಯದಿಂದ ಮಗುವಿಗೆ ಕಿಡ್ನಿ ಸಮಸ್ಯೆ ಉಂಟಾಗಿ ಮೃತಪಟ್ಟಿದೆ. ಚಿಕಿತ್ಸೆಗೆ ಲಕ್ಷಾಂತರ ರೂ. ಸಾಲವಾಗಿದೆ. ಕೃಷಿಯೂ ನಾಶವಾಗಿದೆ ಎಂದು ಅಳಲು ತೋಡಿಕೊಂಡರು.

"

ಕಾರ್ಖಾನೆಗಳಿಂದ ಹಿರೇಬಗನಾಳ, ಹಿರೇಕಾಸನಕಂಡಿ ಸೇರಿದಂತೆ ಸುತ್ತಮುತ್ತಲಿನ 20 ಗ್ರಾಮಗಳಲ್ಲಿ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿವೆ. ತಜ್ಞ ವಿಜ್ಞಾನಿಗಳಿಂದ ಇಲ್ಲಿನ ಪರಿಸರ ಹಾಗೂ ಜನರ ಆರೋಗ್ಯದ ಕುರಿತು ಸಮಗ್ರ ಸಮೀಕ್ಷೆ ನಡೆಸಬೇಕು. ಕಾರ್ಖಾನೆಗಳ ಕಲುಷಿತ ನೀರು ತುಂಗಭದ್ರಾ ನದಿ ಸೇರುತ್ತಿದ್ದು, ಬಸಾಪುರ ಕೆರೆ ಸಂಪೂರ್ಣ ಹಾನಿಗೊಳಗಾಗಿದೆ. ಸರ್ಕಾರ ತಕ್ಷಣವೇ ಹೊಸ ಕಾರ್ಖಾನೆಗಳ ವಿಸ್ತರಣೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ದಿನಾಂಕ ನಿಗದಿಪಡಿಸಬೇಕು.

ಅಧಿಕಾರಿಗೆ ಈಡಿಯಟ್​ ಎಂದ ಅಧ್ಯಕ್ಷ

ಕೈಗಾರಿಕೆಗಳ ಪರಿಶೀಲನೆಗೆ ಆಗಮಿಸಿದ್ದ ನರೇಂದ್ರಸ್ವಾಮಿ ತಾವೇ ಮುಂದೆ ಹೋಗಿ ಕಾರ್ಖಾನೆ ತಲುಪಿದರೂ ಕೊಪ್ಪಳ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬರುತ್ತಿರಲಿಲ್ಲ. ಇದರಿಂದ ಕೆರಳಿದ ಅಧ್ಯಕ್ಷರು, ಬೇಗ ಬೇಗ ಬನ್ನಿ, ನೀವೇ ಮುಂದೆ ತೋರಿಸಬೇಕು ಅಲ್ವಾ, ಸುಮ್ನೆ ಯಾಕೆ ಟೈಂ ವೇಸ್ಟ್​ ಮಾಡ್ತಿರಾ ಈಡಿಯಟ್​ ಎಂದು ಪರಿಸರ ಅಧಿಕಾರಿ ವೈ.ಎಸ್​.ಹರಿಶಂಕರ್​ ವಿರುದ್ಧ ಹರಿಹಾಯ್ದರು.