ಯಲಬುರ್ಗಾ ಮಾರುಕಟ್ಟೆಗೆ ಲಗ್ಗೆಯಿಟ್ಟ ಕರ್ಚಿಕಾಯಿ. 
ಕೊಪ್ಪಳ

ವರ್ಷಕ್ಕೊಮ್ಮೆ ಸಿಗುವ ಕರ್ಚಿಕಾಯಿಗೆ ಹೆಚ್ಚಿದ ಬೇಡಿಕೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • 30 ರೂ.ಗೆ ಒಂದು ಚಟಾಕ್‌ನಂತೆ ಮಾರಾಟ
ಯಲಬುರ್ಗಾ: ಔಷಧ ಗುಣವುಳ್ಳ ಕರ್ಚಿಕಾಯಿ ಪಟ್ಟಣದ ಮಾರುಕಟ್ಟೆ ಪ್ರವೇಶಿಸಿದ್ದು, ಕಳೆದ ಒಂದು ವಾರದಿಂದ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಮಾರಾಟ ಜೋರಾಗಿದೆ.
ಮಳೆಗಾಲದಲ್ಲಿ ಕಪ್ಪು ಮಣ್ಣಿನ ಹೊಲಗಳಲ್ಲಿ ಸಹಜವಾಗಿಯೇ ಬೆಳೆಯುವ ಕರ್ಚಿಕಾಯಿ ಔಷಧೀಯ ಗುಣ ಹೊಂದಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸೊಪ್ಪುಗಳ ಮಾರಾಟ ಒಂದೆಡೆಯಾದರೆ, ಗ್ರಾಮೀಣ ಭಾಗದಿಂದ ಬರುವ ಮಾರಾಟಗಾರರು 30 ರೂ.ಗೆ ಒಂದು ಚಟಾಕ್‌ನಂತೆ ಕರ್ಚಿಕಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಿತ್ಯ 1000ದಿಂದ 1500ವರೆಗೆ ಆದಾಯ ಗಳಿಸುತ್ತಿದ್ದಾರೆ. ಬೆಳಗ್ಗೆ 7ಕ್ಕೆ ಪಟ್ಟಣಕ್ಕೆ ಬಂದು ವಿವಿಧ ಕಡೆಗಳಲ್ಲಿ ಮಾರಾಟ ಮಾಡಿ ಸಂಜೆ ತಮ್ಮೂರು ಸೇರುತ್ತಿರುವುದು ಸಾಮಾನ್ಯವಾಗಿದೆ. ಹೊಲಗಳಲ್ಲಿ ಕರ್ಚಿಕಾಯಿ ಬಿಡಿಸಿ ಮಾರುಕಟ್ಟೆಗೆ ತಂದು ಮಾರುತ್ತಿರುವ ಮಹಿಳೆಯರಿಗೆ ತಾತ್ಕಾಲಿಕ ಉದ್ಯೋಗ ದೊರೆತಂದಾಗಿದೆ.

ಮುಂಗಾರು ಪ್ರಾರಂಭದಲ್ಲಿ ಸಿಗುವ ಕರ್ಚಿಕಾಯಿ ಹುರಿದು ತಿಂದವರೇ ಬಲ್ಲರು ಅದರ ರುಚಿ. ಬಿಸಿಬಿಸಿ ಜೋಳದ ರೊಟ್ಟಿಗೆ ಇದು ಹೇಳಿ ಮಾಡಿಸಿದ ಪಲ್ಯ. ವರ್ಷಕ್ಕೊಮ್ಮೆ ಸಿಗುವ ಕರ್ಚಿಕಾಯಿಯನ್ನು ಕೊಂಡುತಂದ ದಿನವೇ ಹುರಿದಿಟ್ಟುಕೊಂಡರೆ ಎರಡ್ಮೂರು ದಿನ ಬಳಸಬಹುದು.

— ಅಶ್ವಿನಿ ಪಾಟೀಲ್, ಯಲಬುರ್ಗಾ

ಕಳೆದ ಮೂರ‌್ನಾಲ್ಕು ದಿನಗಳಿಂದ ಕರ್ಚಿಕಾಯಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು, ಬೇಡಿಕೆ ಇದೆ. ನಸುಕಿನಲ್ಲೇ ಹೊಲಗಳಿಗೆ ತೆರಳಿ ಕರ್ಚಿಕಾಯಿ ಕಿತ್ತುಕೊಂಡು ಬಂದು ಮಾರಾಟ ಮಾಡಲಾಗುತ್ತಿದೆ. ಈ ಫಸಲು ಒಮ್ಮೆ ಆರಂಭಗೊಂಡರೆ ತಿಂಗಳ ಕಾಲ ಮಾರಾಟಕ್ಕೆ ಲಭ್ಯವಾಗುತ್ತವೆ.

— ಮುತ್ತುರಾಜ್ ಹೊಸಳ್ಳಿ ಕರ್ಚಿಕಾಯಿ ವ್ಯಾಪಾರಿ, ಯಲಬುರ್ಗಾ