ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡ ಜನ್ಮದಿನಾಚರಣೆ ಅಂಗವಾಗಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಸಸ್ಯಸಂತೆ, ತೋಟಗಾರಿಕೆ ಅಭಿಯಾನ ಅಭಿಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವೀಸಿದರು. ಶಾಸಕ ರಾವೇಂದ್ರ ಹಿಟ್ನಾಳ ಇದ್ದರು.
- ಕೊಪಣಗಿರಿಯಲ್ಲಿ ಸಸ್ಯಸಂತೆ, ತೋಟಗಾರಿಕೆ ಅಭಿಯಾನ
- ಸಚಿವ ಶಿವರಾಜ ತಂಗಡಗಿಯಿಂದ ಚಾಲನೆ
ಕೊಪ್ಪಳ : ರೈತರು ಹಾಗೂ ಸಾರ್ವಜನಿಕರಲ್ಲಿ ತೋಟಗಾರಿಕೆ ಬಗ್ಗೆ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ 10ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2026ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.
ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡ ಜನ್ಮದಿನಾಚರಣೆ ಅಂಗವಾಗಿ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆ.20ರ ವರೆಗೆ ಸಸ್ಯಸಂತೆ, ತೋಟಗಾರಿಕೆ ಅಭಿಯಾನ ನಡೆಯಲಿದೆ. ಸಸ್ಯಸಂತೆಯಲ್ಲಿ ವಿವಿಧ ಹಣ್ಣುಗಳ ಸಸಿಗಳು, ಕರಿಬೇವು, ವೀಳ್ಯದೆಲೆ, ಸಾಂಬಾರು ಬೆಳೆಗಳು ಹಾಗೂ ಅಲಂಕಾರಿಕ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದ್ದು. ಜಿಲ್ಲೆಯ 9 ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ 15ಕ್ಕೂ ಹೆಚ್ಚು ಹಣ್ಣಿನ ತಳಿಗಳ ಜತೆಗೆ ವಾಟರ್ ಆಪಲ್, ಲಿಚಿ, ಬೀಜರಹಿತ ಲಿಂಬೆ, ರಾಮಫಲ ಹಾಗೂ ಲಕ್ಷ$್ಮಣಫಲ ಸಸಿಗಳು ಲಭ್ಯವಿವೆ.
ವಿಶೇಷ ಆಕರ್ಷಣೆಯಾಗಿ ಮಿಯಾಜಾಕಿ ಮಾವು ಹಾಗೂ ವಿವಿಧ ಹೈಬ್ರಿಡ್ ತೆಂಗಿನ ತಳಿಗಳ ಸಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪಾಲಿಮನೆಗಳಲ್ಲಿ ಬೆಳೆದ 5 ಲಕ್ಷಕ್ಕೂ ಅಧಿಕ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ನುಗ್ಗೆ ಸಸಿಗಳು ಹಾಗೂ 100ಕ್ಕೂ ಹೆಚ್ಚು ಅಲಂಕಾರಿಕ ಹೂವಿನ ಸಸಿಗಳೂ ಲಭ್ಯವಿವೆ.
ಸಾವಯವ ಕೃಷಿಗೆ ಉತ್ತೇಜನ ನೀಡಲು ಪಂಚಗವ್ಯ, ಜೀವಾಮೃತ, ಬೀಜಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ದಶಪರ್ಣಿ ಕಫಿಯ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಯುತ್ತದೆ. ಹನಿ ನೀರಾವರಿ, ಮಳೆನೀರು ಕೊಯ್ಲು, ಬೋರ್ವೆಲ್ ರೀಚಾರ್ಜ್, ಸೋಲಾರ್ ತಂತ್ರಜ್ಞಾನ ಹಾಗೂ ಒಪ್ಪಂದ ಕೃಷಿ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ನಗರವಾಸಿಗಳಿಗೆ ವರ್ಟಿಕಲ್ ಗಾರ್ಡನ್, ಹೈಡ್ರೋಪೋನಿಕ್ಸ್, ಬೋನ್ಸಾಯ್ ಹಾಗೂ ರಾಕ್ ಗಾರ್ಡನ್ ಕುರಿತು ಮಾಹಿತಿ, ವಿಜ್ಞಾನಿಗಳು ಬರ ನಿರ್ವಹಣೆ, ಮಣ್ಣು-ನೀರು ಪರೀಕ್ಷೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ, ಬೆಳೆ ವಿಮೆ ಹಾಗೂ ಬ್ಯಾಂಕ್ ಸಾಲದ ಕುರಿತು ಸಲಹೆ ನೀಡಲಿದ್ದಾರೆ.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಡಿಸಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ, ತೋಟಗಾರಿಕೆ ಇಲಾಖೆ ಜಂಟಿ ನಿದೇರ್ಶಕ ಕೃಷ್ಣ ಸಿ. ಉಕ್ಕುಂದ ಇತರರಿದ್ದರು.