ಅಳವಂಡಿ ಜೆಸ್ಕಾಂ ಕಚೇರಿ ಮುಂದೆ ರೈತರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಬಸವರಾಜ ಕ್ಯಾವಟರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ್ ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಲ ತಾಲೂಕು ಅಧ್ಯಕ್ಷ ವೀರೇಶ ಸಜ್ಜನ ಇತರರಿದ್ದರು.
- ವಿವಿಧ ಗ್ರಾಮಗಳ ರೈತರಿಂದ ಪ್ರತಿಭಟನೆ
ಅಳವಂಡಿ: ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗ್ರಾಮದ ಜೆಸ್ಕಾಂ ಕಚೇರಿ ಮುಂದೆ ವಿವಿಧ ಗ್ರಾಮಗಳ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ ಕೆಲ ದಿನಗಳಿಂದ ರೈತ ಪಂಪ್‌ಸೆಟ್‌ಗೆ ಪೂರೈಸುವ ವಿದ್ಯುತ್ ಅಸಮರ್ಪಕವಾಗಿದ್ದು, ಪದೇ ಪದೆ ಕಡಿತಗೊಳ್ಳುತ್ತಿದೆ. ಇದರಿಂದ ಮೋಟಾರ್‌ಗಳು ಸುಡುತ್ತಿವೆ. ಬೆಳೆಗಳಿಗೆ ಸರಿಯಾಗಿ ನೀರು ಹರಿಸಲಾಗದೆ ಬೆಳೆಗಳು ಬಾಡುತ್ತಿವೆ. ವಿದ್ಯುತ್ ಸಮರ್ಪಕವಾಗಿ ಪೂರೈಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಮರ್ಪಕವಾಗಿ ವಿದ್ಯುತ್ ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದರು.
ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ರಾಜ್ಯದಲ್ಲಿ ಬರದ ವಾತಾವರಣ ಇದ್ದು, ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆಗಳು ಒಣಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಸ್ಕಾಂ ಎಇಇ ಸೈಯದ್ ಮಾತನಾಡಿ, ಅಳವಂಡಿಯಿಂದ ಪೂರೈಸುತ್ತಿರುವ ಎಲ್ಲ ವಿದ್ಯುತ್ ಲೈನ್‌ಗಳು ಓವರ್ ಲೋಡ್ ಆಗುತ್ತಿದ್ದು, ಟ್ರಿಪ್ ಆಗಿ ಸಮಸ್ಯೆಯಾಗುತ್ತಿದೆ. 20 ದಿನಗಳಲ್ಲಿ ಹೊಸ ಪರಿವರ್ತಕ ಅಳವಡಿಸಲಾಗುವುದು. ನಿಲೋಗಿಪುರ ವಿದ್ಯುತ್ ವಿತರಣಾ ಕೇಂದ್ರ ಆರಂಭವಾದರೆ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಯಲಿದೆ ಎಂದರು.
ಬಿಜೆಪಿ ಗ್ರಾಮೀಣ ಮಂಡಲ ತಾಲೂಕು ಅಧ್ಯಕ್ಷ ವೀರೇಶ ಸಜ್ಜನ, ಪ್ರಮುಖರಾದ ವೆಂಕಟೇಶ ಹಾಲವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ್ ಪಾಟೀಲ್, ಹನುಮಂತಪ್ಪ, ಶ್ರೀನಿವಾಸ್ ಕಲಾದಗಿ, ಸಿದ್ದಪ್ಪ ಡಂಬಳ, ಚನ್ನಪ್ಪ ಮುತ್ತಾಳ, ರಮೇಶ ಭಾವಿಹಳ್ಳಿ, ಗವಿಸಿದ್ದಪ್ಪ ಗದ್ದಿಕೇರಿ, ವೀರಯ್ಯ, ಮಲ್ಲಪ್ಪ ಶೇಕಪ್ಪ, ಮಾರುತೆಪ್ಪ, ಮಹಾಂತೇಶ, ಮಂಜಪ್ಪ, ಗಂಗಪ್ಪ ಇತರರಿದ್ದರು.