ಬಾಲ ಚೇತನ 
ಕೊಪ್ಪಳ

ಹಿಂದಿ ಹೇರಿಕೆ ವಿರುದ್ಧ ಸೆಡ್ಡು, ಪ್ರೈಮರಿಲೀ ದ್ವಿಭಾಷಾ ಶಿಕ್ಷಣ ಜಾರಿ

ಪ್ರಮುಖ ಮುಖ್ಯಾಂಶಗಳು

  • 15 ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ
  • 25,014 ಶಾಲೆಗಳಲ್ಲಿ ಬೋಧನೆ
ಕೊಪ್ಪಳ: ಹಿಂದಿ ಹೇರಿಕೆ ವಿರುದ್ಧ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ನೀತಿ ಜಾರಿಗೊಳಿಸುವ ಮೂಲಕ ಬದ್ಧತೆ ಪ್ರದರ್ಶಿಸಿದೆ. 15 ಜಿಲ್ಲೆಗಳ 25,014 ಶಾಲೆಗಳ1-5ನೇ ತರಗತಿವರೆಗೆ ದ್ವಿಭಾಷಾ ಪಠ್ಯ ಬೋಧನೆಗೆ ಸಿದ್ಧತೆ ಅಂತಿಮಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ವಿಸ್ತರಿಸಲು ದಿಟ್ಟ ಹೆಜ್ಜೆ ಇಟ್ಟಿದೆ.
ಗ್ರಾಮೀಣ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಪೈಪೋಟಿ ಒಡ್ಡುವಲ್ಲಿ ಇಂಗ್ಲೀಷ್​ ಅಗತ್ಯವೆಂದು ದ್ವಿಭಾಷಾ ಪದ್ಧತಿ ಜಾರಿ ಸಮರ್ಥಿಸಲಾಗುತ್ತಿದೆ. ಕೇಂದ್ರದ ಹಿಂದಿ ಹೇರಿಕೆ ಖಂಡಿಸಿರುವ ರಾಜ್ಯ ಸರ್ಕಾರ ನುಡಿದಂತೆ ಎರಡು ಭಾಷಾ ಮಾದರಿ ಶಿಕ್ಷಣ ಪರಿಚಯಿಸಿದೆ. ಹಲವು ಪರ&ವಿರೋಧ ಅಭಿಪ್ರಾಯಗಳ ನಡುವೆ ನೂತನ ಶಿಕ್ಷಣ ಪದ್ಧತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಹಂತದಿಂದಲೇ ಸರ್ಕಾರಿ ಶಾಲೆ ಮಕ್ಕಳಿಗೆ ಲಭ್ಯವಾಗಲಿದೆ.
ಪ್ರಾಯೋಗಿಕವಾಗಿ ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬರಲಿದೆ. ಪ್ರಾಥಮಿಕ ಹಂತದಿಂದಲೇ ಕನ್ನಡ ಮತ್ತು ಆಂಗ್ಲ ಭಾಷಾ ಕಲಿಕೆ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಸೂಕ್ತ ಪೈಪೋಟಿ ನೀಡುವಲ್ಲಿ ನೆರವಾಗಲಿದೆ ಎಂಬುದು ಸರ್ಕಾರದ ಆಶಯ. ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಿದ್ದು, ನಲಿ&ಕಲಿ ಪದ್ಧತಿ ಕೈ ಬಿಟ್ಟು ಮೊದಲಿನಂತೆ ಏಕ ದರ್ಜೆ ತರಗತಿ ಮಾದರಿ ಮರು ಪರಿಚಯಿಸಲಾಗಿದೆ. ಆಯಾ ತರಗತಿಗೆ ಶಿಕ್ಷಕರು ನಿಯೋಜನೆಗೊಳ್ಳಲಿದ್ದು ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಪಠ್ಯ ಬೋಧನೆ ಮಾಡಲಿದ್ದಾರೆ.
ಬಾಕಿ 16,762 ಶಾಲೆಗಳಲ್ಲಿ 1ರಿಂದ 3ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಹಾಗೂ 1-2ನೇ ತರಗತಿ ಸರ್ಕಾರಿ ಉರ್ದು ಶಾಲೆಗಳಲ್ಲಿ ನಲಿ-ಕಲಿ ಪದ್ಧತಿ ಮುಂದುವರೆಯಲಿದೆ. ಅನುದಾನಿತ ಹಾಗೂ ಸ್ಥಳಿಯ ಸಂಸ್ಥೆಗಳು ಮತ್ತು ಇತರ ಶಾಲೆಗಳಲ್ಲಿ 1-5ನೇ ತರಗತಿ ಶಾಲೆಯಲ್ಲಿ ನಲಿ-ಕಲಿ ಪದ್ಧತಿ ಅಳವಡಿಕೆಗೆ ಶಿಕ್ಷಣ ಇಲಾಖೆ ಯೋಜಿಸಿದೆ.

15 ಜಿಲ್ಲೆಗಳಲ್ಲಿ ಜಾರಿ

ಪ್ರಸಕ್ತ ವರ್ಷ 24,328 ಪಿಎಂಶ್ರೀ, ಇಸಿಸಿಎಸ್​, ಕರ್ನಾಟಕ ಪಬ್ಲಿಕ್​ ಶಾಲೆಗಳು ಹಾಗೂ 686 ಗಣಿ ಬಾಧಿತ ಪ್ರದೇಶಗಳ ಶಾಲೆಗಳ(ಸಿಇಪಿಎಂಐಝಡ್​) ಒಟ್ಟು 25,014 ಶಾಲೆಗಳಲ್ಲಿ ಏಕ ದರ್ಜೆ ತರಗತಿ ಹಾಗೂ 1ರಿಂದ5ನೇ ತರಗತಿವರೆಗೆ ದ್ವಿಭಾಷಾ ಶಿಕ್ಷಣ ಆರಂಭಗೊಳ್ಳಲಿದೆ. ಆರಂಭಿಕವಾಗಿ ಬೆಂಗಳೂರು ಉತ್ತರ, ಬೆಂಗಳೂರು ದಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ, ಹಾಸನ, ತುಮಕೂರು, ದಣ ಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.

ಕನ್ನಡ-ಉರ್ದುವಿನೊಂದಿಗೆ ಇಂಗ್ಲೀಷ್​

ಮಾತೃ ಭಾಷೆ, ಮಾಧ್ಯಮ ಸಂಯೋಜನೆಯಡಿ ಭಾಷಾ ನೀತಿ ಜಾರಿಗೆ ತರಲಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯೊಂದಿಗೆ ಇಂಗ್ಲೀಷ್​ ಮಾಧ್ಯಮದಲ್ಲೂ ಶಿಕ್ಷಣ ದೊರೆಯಲಿದೆ. ಅದರಂತೆ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಭಾಷಾ ಪಠ್ಯ ಬೋಧನೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನೂತನ ಮಾದರಿ ಬಗ್ಗೆ ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಿ ಪಾಠ ಬೋಧನೆಗೆ ಅಣಿಗೊಳಿಸಲಾಗಿದೆ.

ಖಾಸಗಿ ಮಾದರಿ ಅನುಕರಣೆ

ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಎಲ್ಲ ಮಾದರಿ ಅನುಕೂಲ ಸಿಗಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಹೊಸ ಮಾದರಿ ಪರಿಚಯಿಸಿದೆ. ಎರಡು ಭಾಷೆಯಲ್ಲಿ "ಬಾಲ ಚೇತನ' ಹೆಸರಿನ ಪಠ್ಯ ಪುಸ್ತಕ ಸಿದ್ಧಪಡಿಸಲಾಗಿದೆ. ಖಾಸಗಿ ಶಾಲೆಗಲ್ಲಿ ಅನುಸರಿಸುವಂತೆ 7,87,140 ಬಾಲ ಚೇತನ ಅಭ್ಯಾಸ ಪುಸ್ತಕ ಹಾಗೂ ಚಟುವಟಿಕೆ ಪುಸ್ತಕ, 1,96,785 ದಿನಚರಿ ಮುದ್ರಿಸಲಾಗಿದೆ. ಆಯಾ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪಿದ್ದು ಜೂನ್​ 1ರಿಂದ ಶಾಲೆ ಆರಂಭಗೊಳ್ಳುತ್ತಲೇ ಮಕ್ಕಳ ಕೈಗೆ ಸೇರಲಿವೆ.