ಮುನಿರಾಬಾದ್ ಸಮೀಪದ ಬಂಡಿಹರ್ಲಾಪುರ ಗ್ರಾಮದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆ ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಿಢೀರ್ ದಾಳಿ ನೆಡೆಸಿದರು. ಎಸ್‌ಪಿ ರಾಮ್ ಎಲ್.ಅರಸಿದ್ದಿ, ಮುನಿರಾಬಾದ್ ಠಾಣೆಯ ಸಿಪಿಐ ಜಯಪ್ರಕಾಶ, ಪಿಎಸ್‌ಐ ಸುನೀಲ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಗರಾಜ, ನವೀನ್ ಇತರರಿದ್ದರು.
ಅಕ್ರಮ ಗಣಿಗಾರಿಕೆ, ಯಂತ್ರೋಪಕರಣ ಸೀಜ್
ಮುನಿರಾಬಾದ್: ಸಮೀಪದ ಶಿವಪುರ, ಬಂಡಿಹರ್ಲಾಪುರ ಹಾಗೂ ಹುಸೇನ್‌ಪುರ ಗ್ರಾಮಗಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗ್ರಾನೈಟ್ ಗಣಿಗಾರಿಕೆಗೆ ಜಿಲ್ಲಾಡಳಿತ ಭಾನುವಾರ ಬೆಳಗ್ಗೆ ಬಿಸಿ ಮುಟ್ಟಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಐಜಿಪಿ ಎಸ್.ಪಿ.ಹರ್ಷಾ ಆದೇಶದ ಹಿನ್ನೆಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 13 ಹಿಟ್ಯಾಚಿ, 10 ಲಾರಿ, 14 ಟ್ರಾಕ್ಟರ್, 2 ಕ್ರೇನ್ ಸೀಜ್ ಮಾಡಲಾಗಿದೆ.
ಅರಣ್ಯ ಸಂಪತ್ತಿನ ನಾಶಕ್ಕೆ ತಡೆ: ಬಂಡಿಹರ್ಲಾಪುರದ ಸರ್ವೇ ನಂಬರ್ 132, 133 ಮತ್ತು 134ರ ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. 7 ಗುಡ್ಡಗಳ ಈ ಭಾಗ ನೈಸರ್ಗಿಕ ಸಂಪನ್ಮೂಲ, ಔಷಧೀಯ ಸಸ್ಯಗಳು ಹಾಗೂ ಕಾಡುಪ್ರಾಣಿಗಳ ಆವಾಸಸ್ಥಾನವಾಗಿದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷೃದಿಂದ ಮಾರಣಹೋಮ ನಡೆಯುತ್ತಿದೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿಂದೆ ಶಿವಪುರದ 12 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಕ್ರಮಕ್ಕೆ ಸಾಥ್ ನೀಡಿದ ಜಮೀನು ಮಾಲೀಕರು ಮತ್ತು ಯಂತ್ರಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಪ್ರದೇಶದ ನಷ್ಟಕ್ಕೆ ದಂಡ ವಿಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಸೂಚಿಸಿದ್ದಾರೆ.