ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮವನ್ನು ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಗುರುವಾರ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಡಾ.ಸರ್ರಾಜ್ ಅಹ್ಮದ್, ಡಾ.ಶಶಿಕುಮಾರ ಇತರರಿದ್ದರು. 
ಕೊಪ್ಪಳ

ತಾರತಮ್ಯ ರಹಿತ ಸಹಬಾಳ್ವೆಗೆ ಶ್ರಮಿಸಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • * ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿಕೆ
  • ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
ಗಂಗಾವತಿ: ಅಮಾನವೀಯತೆ ಕೊನೆಗಾಣಿಸಲು ಮಾನವ ಹಕ್ಕುಗಳ ಜಾಗೃತಿ ಅತಿ ಅವಶ್ಯವಾಗಿದ್ದು, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು. ಮನುಷ್ಯರು ಮನುಷ್ಯರಂತೆ ಕಾಣುವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದ್ದು, ಒಳ್ಳೆದು ಬಯಸದಿದ್ದರೂ ಕೆಟ್ಟದ್ದನ್ನು ಎಂದಿಗೂ ಮಾಡಬಾರದು. ಇತರರ ಹಕ್ಕುಗಳನ್ನು ಹತ್ತಿಕ್ಕದಂತೆ ಬದುಕಬೇಕಿದ್ದು, ಜಗತ್ತಿನಲ್ಲಿ ತಾರತಮ್ಯರಹಿತ ಸಹಬಾಳ್ವೆಗೆ ಶ್ರಮಿಸಬೇಕಿದೆ ಎಂದರು.
ಪ್ರಾಧ್ಯಾಪಕ ಡಾ.ಸರ್ರಾಜ್ ಅಹ್ಮದ್ ಮಾತನಾಡಿ, ಅನಗತ್ಯವಾಗಿ ಭಾಷೆ, ಲಿಂಗ, ಜಾತಿ, ಧರ್ಮವನ್ನಾಧರಿಸಿ ಮಾನವರ ಹಕ್ಕುಗಳಿಗೆ ತೊಂದರೆ ಕೊಡದೇ ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿಯಬೇಕು ಎಂದರು.
ಮಾನವ ಹಕ್ಕುಗಳ ಮಹತ್ವ ಮತ್ತು ಇತಿಹಾಸ ಕುರಿತು ಪ್ರಾಧ್ಯಾಪಕ ಡಾ. ಶಶಿಕುಮಾರ ಮಾತನಾಡಿದರು. ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿ ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಪ್ರಾಧ್ಯಾಪಕ ಕೆ.ವಿರೂಪಾಕ್ಷ, ಸಹಾಯಕ ಪ್ರಾಧ್ಯಾಪಕರಾದ ವೀರೇಶ, ರವಿಕುಮಾರ, ಸಿಬ್ಬಂದಿ ಜಬೀನಾಬೇಗಂ, ವಿನಾಯಕ, ಚಿನ್ನವರಪ್ರಸಾದ, ಶರಣ ಹಾಗೂ ಅತಿಥಿ ಉಪನ್ಯಾಸಕರಿದ್ದರು.