ಕೊಪ್ಪಳದ ಹುಲಿಕೆರೆಯಲ್ಲಿ ನಿರ್ಮಿಸಲಾದ ರಸ್ತೆ ತೆರವು ಕಾರ್ಯಾಚರಣೆಗೆ ಬುಧವಾರ ಮುಂದಾದ ಅಧಿಕಾರಿಗಳು.
- ತೆಗೆಯದಂತೆ ಹೈ ಡ್ರಾಮಾ
- ವಾರದಲ್ಲಿ ಸರ್ವೇ ಭರವಸೆ ನೀಡಿದ ಡಿಸಿ
ಕೊಪ್ಪಳ : ನಗರದ ಐತಿಹಾಸಿಕ ಹುಲಿಕೆರೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ರಸ್ತೆ ತೆರವಿಗೆ ಬುಧವಾರ ಅಧಿಕಾರಿಗಳು ಮುಂದಾದಾಗ ಕೆಲವರು ಅಡ್ಡಿಪಡಿಸಿ ತಡೆಗೆ ಯತ್ನಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಡಾ.ಸುರೇಶ ಬಿ.ಇಟ್ನಾಳ ವಾರದಲ್ಲಿ ಸರ್ವೇ ನಡೆಸಿ ಅತಿಕ್ರಮ ತೆರವು ಮಾಡುವುದಾಗಿ ತಿಳಿಸಿದರು. ಬಳಿಕ ರೋಡ್ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.
88 ಎಕರೆ ವಿಶಾಲ ಕೆರೆ ಈಗ ಅಕ್ರಮವಾಗಿ ಒತ್ತುವರಿ ಆಗಿರುವ ಆರೋಪ ಕೇಳಿ ಬಂದಿದೆ. ಕೆರೆ ಕೋಡಿ ಒಡೆದು ತುಂಬಿದ ಕೆರೆ ಬರಿದು ಮಾಡಲಾಗಿದೆ. ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದಾರೆಂದು ಬಿಜೆಪಿ ನಾಯಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ಕೂಡಲೇ ದಾರಿಗೆ ಹಾಕಿದ ಮರಂ ತೆಗೆಯುವಂತೆ ಒತ್ತಾಯಿಸಿದ್ದರು. ಅಳತೆ ಮಾಡಿ ಅತಿಕ್ರಮ ತೆಗೆಯುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಬುಧವಾರ ಕೆರೆಯೊಳಗೆ ನಿರ್ಮಿಸಿದ ರಸ್ತೆಗೆ ಹಾಕಿದ ಮರಂ ತೆಗೆಯಲು ಮುಂದಾದಾಗ ಕೆಲವರು ಅಡ್ಡಿಪಡಿಸಿದರು. ರಸ್ತೆ ಅಕ್ರಮವೆಂದು ಹೇಗೆ ಹೇಳುತ್ತೀರಿ. ಮೊದಲೇ ರಸ್ತೆ ಇತ್ತು ಎಂದು ಕೆಲವರು ವಾದ ಮಾಡಿದರು. ಎಲ್ಲೆಲ್ಲಿ ಅತಿಕ್ರಮಿಸಲಾಗಿದೆ ಅದೆಲ್ಲ ಮೊದಲು ತೆರವು ಮಾಡಿ ಎಂದು ಪಟ್ಟು ಹಿಡಿದರು.
ಇದರಿಂದ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಬಳಿಕ ಜಿಲ್ಲಾಧಿಕಾರಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಸರ್ವೇ ಅಧಿಕಾರಿಗಳು ಆಗಮಿಸಿದರು. ಕೆರೆ ಒತ್ತುವರಿ ಆರೋಪ ಕೇಳಿ ಬಂದಿವೆ. ಒಂದು ವಾರದೊಳಗೆ ಎಲ್ಲ ಕೆರೆ ಸರ್ವೇ ಮಾಡಲಾಗುವುದು. ಎಲ್ಲೆಲ್ಲಿ ಒತ್ತುವಾರಿ ಆಗಿದೆ ಎಂದು ಗುರುತಿಸಲಾಗುವುದು. ಹದ್ದುಬಸ್ತು ಮಾಡಿಕೊಂಡು ಯಾರೇ ಅತಿಕ್ರಮಿಸಿದ್ದರೂ ತೆರವು ಮಾಡತ್ತೇವೆಂದು ಭರವಸೆ ನೀಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ನಗರಸಭೆ ಅಧಿಕಾರಿಗಳು ರಸ್ತೆ ತೆರವು ಕಾರ್ಯಾಚರಣೆ ಆರಂಭಿಸಿದರು.
ಅಕ್ರಮವಾಗಿ ನಿರ್ಮಿಸಿದ ರಸ್ತೆ ತೆರವು ಆರಂಭಿಸಿದ್ದೇವೆ. ಜಿಲ್ಲಾಧಿಕಾರಿಗಳು ವಾರದೊಳಗೆ ಸರ್ವೇ ನಡೆಸಿ ಹದ್ದುಬಸ್ತು ಮಾಡಲು ಸೂಚಿಸಿದ್ದಾರೆ. ಅದರಂತೆ ಅಳತೆ ಮಾಡಿ ಅಕ್ರಮ ಗುರುತು ಮಾಡಲಾಗುವುದು. ಬಳಿಕ ಎಲ್ಲೆಲ್ಲಿ ಒತ್ತುವರಿ ಆಗಿದೆ. ಅದೆಲ್ಲವನ್ನು ತೆರವು ಮಾಡುತ್ತೇವೆ. ಸದ್ಯ ರಸ್ತೆ ತೆರವು ಆರಂಭಿಸಿದ್ದೇವೆ.