ಹುಲಿಗೆಮ್ಮ ದೇವಿ ಮಹಾ ರಥೋತ್ಸವವು ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. 
ಕೊಪ್ಪಳ

ಉಧೋ.. ಉಧೋ.. ಹುಲಿಗೆಮ್ಮ

ಪ್ರಮುಖ ಮುಖ್ಯಾಂಶಗಳು

  • ಹುಲಿಗಿಯಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿ
  • ನಾನಾ ರಾಜ್ಯಗಳಿಂದ ಬಂದಿದ್ದ ಜನರು
  • ಶಾಸ್ತ್ರೋಕ್ತ ಪೂಜೆ, ಉತ್ತತ್ತಿ ಸೇವೆ
  • ಜನಸಾಗರದ ನಡುವೆ ಜರುಗಿದ ತೇರು
ಮುನಿರಾಬಾದ್: ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ಮಹಾ ರಥೋತ್ಸವವು ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಈ ಸಂದರ್ಭ ಭಕ್ತರು ‘ಹುಲಿಗೆಮ್ಮ ದೇವಿ.. ಉಧೋ ಉಧೋ’ ಎಂದು ಕೂಗಿದ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಲಾಯಿತು. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿದ್ದರು.
ಸಂಜೆ ವೇಳೆಗೆ ರಥಬೀದಿ ಭಕ್ತಸಾಗರದಿಂದ ತುಂಬಿಹೋಗಿತ್ತು. ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಚಾಲನೆ ನೀಡಲಾಯಿತು. ಈ ಕ್ಷಣವನ್ನು ಕಣ್ತುಂಬಿಕೊಂಡ ಭಕ್ತರು ತೇರಿನ ಕಲಶಕ್ಕೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಬಾಜಾ ಭಜಂತ್ರಿ, ಡೊಳ್ಳು ಕುಣಿತ ಹಾಗೂ ಬ್ಯಾಂಡ್ ಮೇಳಗಳು ಜಾತ್ರೆಯ ಮೆರುಗು ಹೆಚ್ಚಿಸಿದವು.
ಭಕ್ತರಿಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಕೈಗೊಂಡಿತ್ತು. ಕುಡಿವ ನೀರು, ತಾತ್ಕಾಲಿಕ ಶೌಚಗೃಹ, ಸ್ನಾನಗೃಹ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ 650ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂದರ್ಭ ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಎಎಸ್ಪಿ ಹೇಮಂತಕುಮಾರ್, ಹುಲಿಗೆಮ್ಮ ದೇವಸ್ಥಾನ ಕಾರ್ಯದರ್ಶಿ ಎಂ.ಎಚ್. ಪ್ರಕಾಶರಾವ್, ದೇವಸ್ಥಾನ ಪ್ರಾಧಿಕಾರ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಇಳಿಗೇರ್, ಶರಣಗೌಡ ಪಾಟೀಲ್, ವೆಂಕಟೇಶ್ ವಿ., ಪಂಪಾಪತಿ ರಾಟಿ, ವಿಜಯ್ ಕುಮಾರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.