ಶ್ರೀ ಹುಲಿಗೆಮ್ಮ ದೇವಿ ಕಾರ್ತಿಕೋತ್ಸವ ನಿಮಿತ್ತ ದೇವಸ್ಥಾನ ಆವರಣದಲ್ಲಿ ಭಕ್ತರು ದೀಪಗಳನ್ನು ಬೆಳಗಿಸಿದರು.
- ವಿವಿಧೆಡೆಯಿಂದ ಭಕ್ತರ ಆಗಮನ
- ದೀಪ ಬೆಳಗಿ ಭಕ್ತಿ ಸಮರ್ಪಣೆ
ಮುನಿರಾಬಾದ್: ಸಮೀಪದ ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಅದ್ದೂರಿಯಾಗಿ ಕಾರ್ತಿಕೋತ್ಸವ ಜರುಗಿತು.
ಹಿಂದು ಧಾರ್ಮಿಕ ದತ್ತಿ ಇಲಾಖೆ ಮತ್ತು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ತಿಕ ಅಮಾವಾಸ್ಯೆ ನಿಮಿತ್ತ ಕಾರ್ತಿಕೋತ್ಸವ ಆಯೋಜಿಸಲಾಗಿತ್ತು. ಈ ನಿಮಿತ್ತ ಜಗನ್ಮಾತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸುಪ್ರಭಾತ ಸೇವೆ, ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ ಸೇವೆ, ನೈವೇದ್ಯ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಆದ ಕಾರಣ ವಿವಿಧೆಡೆಯಿಂದ ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನ ಮುಂಭಾಗದ ಗರಡುಗಂಬದ ಮೇಲೆ ದೀಪವನ್ನು ಬೆಳಗಿಸಿ ನಂತರ ಮುಖ್ಯದ್ವಾರ ಮತ್ತು ದೇವಸ್ಥಾನ ಆವರಣದಲ್ಲಿ ರಂಗೋಲಿ ಬಿಡಿಸಿ, ಅದರಲ್ಲಿ ಪಣತಿಗಳನ್ನು ಇಟ್ಟು ದೀಪ ಬೆಳಗಿಸುವ ಮೂಲಕ ಭಕ್ತಿ ಮರೆದರು.