ಬೇಸಿಗೆಯಲ್ಲೂ ಭರ್ತಿಯಾಗಿರುವ ಕುಷ್ಟಗಿ ತಾಲೂಕಿನ ಹುಲಿಯಾಪುರ ಗ್ರಾಮದ ಕೆರೆ. 
ಕೊಪ್ಪಳ

ಬಿರುಬೇಸಿಗೆಯಲ್ಲೂ ಬತ್ತದ ಹುಲಿಯಾಪುರ ಕೆರೆ

ಪ್ರಮುಖ ಮುಖ್ಯಾಂಶಗಳು

  • ಜನ-ಜಾನುವಾರುಗಳಿಗೆ ಅನುಕೂಲ
  • ಕುಷ್ಟಗಿ ಹುಲಿಯಾಪುರ ಕೆರೆಯಲ್ಲಿ ಸಂಪೂರ್ಣ ನೀರು
ಕುಷ್ಟಗಿ: ತಾಲೂಕಿನ ಹುಲಿಯಾಪುರ ಗ್ರಾಮದ ಕೆರೆಯಲ್ಲಿ ಸಂಪೂರ್ಣ ನೀರು ಸಂಗ್ರಹವಾಗಿದ್ದು, ಗ್ರಾಮವಲ್ಲದೇ ಸುತ್ತಲಿನ ಹತ್ತಾರು ಗ್ರಾಮಗಳಿಗೂ ಈ ಕೆರೆ ವರವಾಗಿದೆ.
ತಾಲೂಕು ಕೇಂದ್ರದಿಂದ ಪೂರ್ವಭಾಗಕ್ಕೆ ಹೊಂದಿರುವ ಹುಲಿಯಾಪೂರ ಗ್ರಾಮದ ಕೆರೆ ಅಂದಾಜು 340ಎಕರೆ ವಿಸ್ತೀರ್ಣವಿದ್ದು, ಮಳೆ ನೀರಿನಿಂದ ಸಂಗ್ರಹಿಸಿದ ಕೆರೆ ನೀರು ಜನ-ಜಾನುವಾರಗಳಿಗೆ, ಕೃಷಿ ಚಟುವಟಿಕೆಗಳ ಹಾಗೂ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳಿಗೆ ದಾಹ ನೀಗಿಸಿಕೊಳ್ಳಲು ಆಸರೆಯಾಗಿದೆ. ಕುರಿ ಮತ್ತು ದನಗಾಹಿಗಳು, ರೈತಾಪಿ ವರ್ಗ ಈ ಕೆರೆಯನ್ನು ನೆಚ್ಚಿಕೊಂಡಿದ್ದಾರೆ. ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಭರ್ತಿಯಾದ ಕೆರೆ ವರ್ಷವಿಡೀ ನೀರು ಪೂರೈಸುತ್ತದೆ. ವಿಶಾಲವಾದ ಕೆರೆಯಲ್ಲಿ ನೀರು ಬತ್ತುವುದು ವಿರಳ ಎನ್ನುತ್ತಾರೆ ಸ್ಥಳೀಯರು.
ಗ್ರಾಮದ ಸುತ್ತಲಿನ ಚಿಕ್ಕ ತೆಮ್ಮಿನಾಳ, ಬಚಿನಾಳ, ಹುಲಿಯಾಪೂರ ತಾಂಡಾ, ಲಿಂಗದಹಳ್ಳಿ, ಮೆಣೇಧಾಳ, ಹಡಗಲಿ, ಸಿದ್ದಾಪೂರ, ಕನ್ನಾಳ, ನೀರಲೂಟಿ, ಮುಕರ್ತಿಹಾಳ, ಜಿ.ಎಚ್.ಕ್ಯಾಂಪ್ ಸೇರಿದಂತೆ ಸುತ್ತಲಿನ ಗ್ರಾಮಗಳ ಕೃಷಿ ಭೂಮಿಗಳಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಕೊಳವೆ ಬಾವಿ ಆಶ್ರಿತ ಕೃಷಿಕರು ಬೇಸಿಗೆಯಲ್ಲೂ ಉತ್ತಮ ಫಸಲು ತೆಗೆಯುತ್ತಾರೆ. ಅಲ್ಲದೇ, ಮನೆಗೆ ಅಗತ್ಯವಿರುವ ಧಾನ್ಯಗಳನ್ನು ಸುಲಭವಾಗಿ ಜಮೀನಲ್ಲಿ ಪಡೆಯಬಹುದು ಎನ್ನುತ್ತಾರೆ ರೈತರು.
ಕೃಷಿಕರಿಗೆ ಸಂಜೀವಿನಿ: ಬೇಸಿಗೆಯಲ್ಲಿ ಜಲಮೂಲಗಳು ಬತ್ತುವುದು ಸಾಮಾನ್ಯ. ಆದರೆ, ಹುಲಿಯಾಪುರ ಕೆರೆ ಇದಕ್ಕೆ ಅಪವಾದವೆಂಬಂತೆ ವರ್ಷವಿಡೀ ಭರ್ತಿಯಾಗಿರುತ್ತದೆ. 1984ರಲ್ಲಿ ನಿರ್ಮಿಸಲಾದ ಈ ಕೆರೆಯು ಹತ್ತಾರು ಹಳ್ಳಿಗಳಿಗೆ ವರವಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿಕರ ಬದುಕಿಗೆ ಸಂಜೀವಿನಿಯಾಗಿದ್ದು, ಕುರಿ-ದನಗಾಹಿಗಳಂತೂ ನೀರಿಗೆ ಈ ಕೆರೆಯನ್ನೆ ಅವಲಂಬಿಸಿದ್ದಾರೆ. ಹುಲಿಯಾಪುರ ಕೆರೆ ಎಂದರೆ ಸದಾ ತುಂಬಿರುವ ಕೆರೆ ಎಂಬ ಭಾವ ಇಲ್ಲಿನ ಜನರಲ್ಲಿದೆ.
"

ಕುಷ್ಟಗಿ ತಾಲೂಕಿನ ಹುಲಿಯಾಪುರ ಗ್ರಾಮದ ನೂರಾರು ಎಕರೆಯಲ್ಲಿ ನಿರ್ಮಾಣವಾದ ಕೆರೆ ಉತ್ತಮ ಮಳೆಯಾದರೆ ಸಾಕು ವರ್ಷಪೂರ್ತಿ ತುಂಬಿರುತ್ತದೆ. ಬೇಸಿಗೆಯಲ್ಲೂ ಕೆರೆಯ ನೀರು ಬತ್ತುವುದಿಲ್ಲ. ಮುಂದಿನ ತಿಂಗಳಲ್ಲಿ ಕೆರೆಗಳಲ್ಲಿ ಜಂಗಲ್ ಕಟಿಂಗ್ ಕಾರ್ಯಗಳಿಗೆ ಟೆಂಡರ್ ಕರೆದು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು.

> ದೇವೇಂದ್ರಪ್ಪ ಇಟ್ಟಂಗಿ ಎಇಇ, ಸಣ್ಣ ನೀರಾವರಿ ಇಲಾಖೆ, ಕುಷ್ಟಗಿ

"

ಹುಲಿಯಾಪುರ ಗ್ರಾಮದ ಕೆರೆ ಸದಾ ನೀರೊದಗಿಸಿ ಈ ಭಾಗದ ರೈತಾಪಿ ವರ್ಗ, ಜನ-ಜಾನುವಾರಗಳಿಗೆ ವರವಾಗಿದೆ. ಪ್ರಾಣಿ-ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲು ಅನುಕೂಲವಾಗಿದೆ. ಕೆರೆ ನೀರು ಸಂಗ್ರಹದಿಂದಾಗಿ ಅಂತರ್ಜಲ ಮಟ್ಟ ಹೆಚ್ಚಿಸಿದೆ.

> ಭೀಮನಗೌಡ ಕೋನಾಪೂರ ರೈತ, ಹುಲಿಯಾಪುರ