ಗಣಿ ಮಾಲೀಕರಿಂದ ಅಪಾರ ಖನಿಜ ಲೂಟಿ ? 
ಕೊಪ್ಪಳ

ಗಣಿ ಮಾಲೀಕರಿಂದ ಅಪಾರ ಖನಿಜ ಲೂಟಿ ?

ಪ್ರಮುಖ ಮುಖ್ಯಾಂಶಗಳು

  • ಆಗದ ದಂಡ ಪಾವತಿ
  • ಎರಡು ಮಾದರಿಯಲ್ಲಿ ಫೈನ್
ಕೊಪ್ಪಳ : ಜಿಲ್ಲೆ ಸೇರಿ ರಾಜ್ಯದಲ್ಲಿ ಅಪಾರ ಖನಿಜ ಲೂಟಿ ಆಗಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ತಲಾಶ್​ನಲ್ಲಿ ಬೆಳಕಿಗೆ ಬಂದಿದೆ. ಆಡಿಟ್​ ವರದಿ ವರದಿಗೂ ವಾಸ್ತವವಾಗಿ ಖನಿಜ ಹೊರತೆಗೆದ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದು ಒಂದೆಡೆಯಾದರೆ, ಅಕ್ರಮ ಒತ್ತುವರಿ ಮಾಡಿರುವುದು ಬಟಾ ಬಯಲಾಗಿದೆ. ಪೋಲಾದ ಕಲ್ಲಿನ ಪ್ರಮಾಣಕ್ಕೆ ದಂಡ ವಿಧಿಸಿ ಇಲಾಖೆ ನೀಡಿರುವ ನೋಟಿಸ್​ಗೆ ಈವರೆಗೂ ಒಬ್ಬರೂ ಉತ್ತರ ನೀಡಿಲ್ಲವೆನ್ನಲಾಗಿದೆ.
ಜಿಲ್ಲೆಯಲ್ಲಿ 85ಕ್ಕೂ ಹೆಚ್ಚು ಕಲ್ಲು ಕ್ವಾರಿ ಲೀಸ್​ಗಳಿವೆ. ಈ ಪೈಕಿ 60 ಕ್ವಾರಿಗಳಲ್ಲಿ ಅಕ್ರಮ ಪತ್ತೆ ಹಚ್ಚಲಾಗಿದೆ. ಹಿಂದೆ ಕೇವಲ ಅಧಿಕಾರಿಗಳು ಅಳತೆ ಮಾಡಿದ ಪ್ರಮಾಣ ದಾಖಲಿಸಿ ಆಡಿಟ್​ ವರದಿ ಸಲ್ಲಿಸಲಾಗಿದೆ. ಇತ್ತೀಚೆಗೆ ಜಿಪಿಎಸ್​, ಡ್ರೋನ್​ ಆಧಾರಿತ ಸರ್ವೇಗಳು ನಡೆದಿದ್ದು ವಾಸ್ತವವಾಗಿ ಎಷ್ಟು ಪ್ರಮಾಣದ ಕಲ್ಲು ಹೊರತೆಗೆಯಲಾಗಿದೆ ಎಂಬುದು ಸರ್ಕಾರದ ಅರಿವಿಗೆ ಬಂದಿದೆ. ಗುತ್ತಿಗೆ ಪಡೆದ ಕಂಪನಿಗೆ ಇಂತಿಷ್ಟು ಪ್ರಮಾಣದ ಕಲ್ಲು ಹೊರತೆಗೆಯಬೇಕೆಂಬ ನಿಯಮವಿದೆ. ಅದಕ್ಕಿಂತ ಹೆಚ್ಚುವರಿ ತೆಗೆದಿದ್ದಲ್ಲದೆ, ಅಕ್ರಮ ಒತ್ತುವರಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಇತ್ತ ಪ್ರತಿ ವರ್ಷ ಸಲ್ಲಿಸಿದ ಆಡಿಟ್​ ವರದಿಗೂ ಹಾಗೂ ವಾಸ್ತವವಾಗಿ ಕ್ವಾರಿಯಲ್ಲಿ ತೆಗೆದ ಖನಿಜದ ಪ್ರಮಾಣ ಹೋಲಿಕೆ ಮಾಡಿದ್ದು ಕೋಟ್ಯಂತರ ಮೆಟ್ರಿಕ್​ ಟನ್​ ಖನಿಜ ಖಾಲಿಯಾಗಿದ್ದು, ಸರ್ಕಾರಕ್ಕೆ ರಾಜಧನ ಪಾವತಿಯಾಗಿಲ್ಲ. ಮತ್ತೊಂದೆಡೆ 34 ಲೀಸ್​ಗಳಲ್ಲಿ ಅಕ್ರಮ ಒತ್ತುವರಿ ನಡೆದಿದ್ದು, ಅದರಿಂದಲೂ ಕೋಟ್ಯಂತರ ರೂ. ರಾಯಲ್ಟಿ ನಷ್ಟವಾಗಿದೆ. ಅದೆಲ್ಲವನ್ನು ಮರಳಿ ಪಡೆಯಲು ಇಲಾಖೆ ಮುಂದಾಗಿದ್ದು, ಏಕರೂಪ ದಂಡ ಪಾವತಿಗೆ ಅವಕಾಶ ಮಾಡಿಕೊಟ್ಟಿದೆ. ಅದರ ಅನುಸಾರ ಜಿಲ್ಲೆಯ 60 ಗಣಿ ಗುತ್ತಿಗೆ ಮಾಲೀಕರಿಗೆ ನೋಟಿಸ್​ ನೀಡಿದ್ದು, ಈವರೆಗೂ ಯಾರೋಬ್ಬರು ದಂಡ ಕಟ್ಟಲು ಮುಂದೆ ಬಂದಿಲ್ಲ. ಬದಲಿಗೆ ಸರ್ಕಾರ ಬಳಿ ವಿನಾಯಿತಿಗೆ ಮುಂದಾದರೆ, ಕೆಲವರು ಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ಎರಡು ವಿಧದ ದಂಡ

ಗುತ್ತಿಗೆ ಪಡೆದ ಕ್ವಾರಿಯಲ್ಲಿಯೇ ತೆಗೆದ ಕಲ್ಲಿನ ಪ್ರಮಾಣಕ್ಕೆ ತಕ್ಕಂತೆ ರಾಜಧನ ಪಾವತಿಸದವರಿಗೆ ಟನ್​ಗೆ 70 ರೂ.ನಂತೆ ದಂಡ ವಿಧಿಸಲಾಗಿದೆ. ಇನ್ನು ಒತ್ತುವರಿ ಮಾಡಿದ ಕಲ್ಲಿನ ಪ್ರಮಾಣಕ್ಕೆ 140 ರೂ.ನಂತೆ ಫೆನಾಲ್ಟಿ ಹಾಕಲಾಗಿದೆ. ಒಟ್ಟು 60 ಲೀಸ್​ಗಳಲ್ಲಿ ಒಬ್ಬರಿಗೆ 89,454 ರೂ.ದಂಡ ಹಾಕಿದರೆ, 29 ಜನರಿಗೆ 5ಲಕ್ಷ ರೂ. ನಿಂತ ಒಂದು ಕೋಟಿ ರೂ.ವರೆಗೆ ದಂಡ ಬಿದ್ದಿದೆ. 13 ಜನರಿಗೆ 1-2 ಕೋಟಿ ರೂ., 12 ಜನರಿಗೆ 2&5 ಕೋಟಿ ರೂ., ನಾಲ್ವರಿಗೆ 5-10 ಕೋಟಿ ರೂ. ಹಾಗೂ ಒಬ್ಬರಿಗೆ 11 ಕೋಟಿ ರೂ. ಫೈನ್​ ಕಟ್ಟಿ ರಾಯಲ್ಟಿ ಕಟ್ಟುವಂತೆ ಸರ್ಕಾರ ಅವಕಾಶ ನೀಡಿದೆ. ಒಟ್ಟು 60 ಕ್ವಾರಿಗಳಿಗೆ 111,90,58,152ರೂ. ಬೃಹತ್​ ದಂಡ ವಿಧಿಸಲಾಗಿದೆ.
"

ರಾಜಧನ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ನೋಟಿಸ್​ ನೀಡಿ ನಿಯಮಾನುಸಾರ ದಂಡ ಪಾವತಿಗೆ ಸೂಚಿಸಲಾಗಿದೆ. ಈವರೆಗೂ ದಂಡ ಕಟ್ಟಿಲ್ಲ.

— ಚಿದರಂಬರ. ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಪ್ಪಳ.
"

ಗಣಿ ಮತ್ತು ಭು ವಿಜ್ಞಾನ ಇಲಾಖೆಯಿಂದ ರಾಜಧನ ನಷ್ಟಕ್ಕೆ ಸಂಬಂಧಿಸಿದಂತೆ ಗಣಿ ಮಾಲೀಕರಿಗೆ ಒನ್​ಟೈಂ ಸೆಟ್ಲಮೆಂಟ್​ನಡಿ ಫೈನ್​ ಕಟ್ಟಲು ನೋಟಿಸ್​ ಜಾರಿಗೊಳಿಸಲಾಗಿದೆ.

— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಡಿಸಿ.