ಕೊಪ್ಪಳದಲ್ಲಿ ಮೂರು ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಹಾಸ್ಟೇಲ್ ಹೊರಗುತ್ತಿಗೆ ನೌಕರರು ಕನಿಷ್ಠ ವೇತನ ಜಾರಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆನ್ನನೇಶ ಕಡಗದ, ಪ್ರಧಾನ ಕಾರ್ಯದರ್ಶಿ ದಾವಲ್ ಸಾಬ್ ಕಂಪ್ಲಿ, ಪ್ರಮುಖರಾದ ಮಹಮ್ಮದ್ ರಫೀಕ್, ದ್ಯಾಮಣ್ಣ ಪರಿಯವರ, ಫಾಲಾಕ್ಷಗೌಡ ಪೋಲಿಸ್ ಪಾಟೀಲ, ಫಕ್ಕಿರಪ್ಪ ಇದ್ದರು.
- ವಸತಿ ನಿಲಯ ಸಿಬ್ಬಂದಿ ಪತ್ರಿಭಟನೆ
ಕೊಪ್ಪಳ : ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಸತಿ ನಿಲಯ, ಶಾಲಾ-&ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಕಳೆದ 15&20 ವರ್ಷಗಳಿಂದ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್ ನೌಕರರು, ಅಟೆಂಡರ್ ಹಾಗೂ ಕಂಪ್ಯೂಟರ್ ಆಪರೇಟರ್ಗಳು ಕಡಿಮೆ ವೇತನಕ್ಕೆ ಯಾವುದೇ ಸೇವಾ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಮೇ 22, 2026ರಂದು ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಹೊರಡಿಸಿದ ಪರಿಷತ ಕನಿಷ್ಠ ವೇತನದ ಆದೇಶ ತಕ್ಷಣ ಜಾರಿಗೊಳಿಸಬೇಕು. ಹೊರಗುತ್ತಿಗೆ ಸಿಬ್ಬಂದಿಗೆ ತಿಂಗಳಿಗೆ ಕನಿಷ್ಠ 36 ಸಾವಿರ ರೂ. ವೇತನ ನೀಡಬೇಕು, ನಿವೃತ್ತಿವರೆಗೆ ಸೇವಾ ಭದ್ರತೆ ಕಲ್ಪಿಸಿ ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲೇ ಖಾಯಂ ನೇಮಕ ಮಾಡಬೇಕು ಹಾಗೂ ವೇತನವನ್ನು ನೇರವಾಗಿ ಇಲಾಖೆಯಿಂದ ಪಾವತಿಸಬೇಕು ಎಂದು ಒತ್ತಾಯಿಸಿದರು.
ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ವಾರಕ್ಕೆ ಒಂದು ದಿನ ರಜೆ, ನಿಗದಿತ ಕೆಲಸದ ಅವಧಿ ಹಾಗೂ ಅಪಘಾತ ಸಂಭವಿಸಿದಾಗ ಇಲಾಖೆಯಿಂದಲೇ ಚಿಕಿತ್ಸೆ ಮತ್ತು ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಿ. ಸಿಬ್ಬಂದಿ ಕಡಿತದ ಆದೇಶ ರದ್ದುಪಡಿಸಿ 50 ವಿದ್ಯಾರ್ಥಿಗಳಿಗೆ ಮೂವರು ಸಿಬ್ಬಂದಿ ಎಂಬ ಹಿಂದಿನ ಪದ್ಧತಿ ಮುಂದುವರಿಸಬೇಕು. ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿ ಮರುನೇಮಕ ಮಾಡಬೇಕು. ಹೊಸ ಹಾಸ್ಟೆಲ್ಗಳಿಗೆ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಅಡುಗೆಯವರು ಮತ್ತು ಅಡುಗೆ ಸಹಾಯಕರು, ಸ್ವಚ್ಛತಾಗಾರರಿಂದ ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಮಾಡಿಸಬಾರದು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆನ್ನನೇಶ ಕಡಗದ, ಪ್ರಧಾನ ಕಾರ್ಯದರ್ಶಿ ದಾವಲ್ ಸಾಬ್ ಕಂಪ್ಲಿ, ಉಪಾಧ್ಯಕ್ಷ ಮಹಮ್ಮದ್ ರಫೀಕ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ದ್ಯಾಮಣ್ಣ ಪರಿಯವರ, ಪ್ರಮುಖರಾದ ಫಾಲಾಕ್ಷಗೌಡ ಪೋಲಿಸ್ ಪಾಟೀಲ, ಜ್ಯೋತಿ ಚಿಕ್ಕಮಠ, ಫಕ್ಕಿರಪ್ಪ, ಪ್ರಕಾಶ ನಾಗಮ್ಮನವರ ಇತರರಿದ್ದರು.