- ಸರ್ಕಾರಕ್ಕೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಒತ್ತಾಯ
ಗಂಗಾವತಿ: ಪ್ರವಾಸೋದ್ಯಮಕ್ಕೆ ಪೂರಕವಾದ ಮತ್ತು ಪ್ರವಾಸಿಗರಿಗೆ ಭದ್ರತೆ ಒದಗಿಸುವ ಹೋಂ ಸ್ಟೇಗಳಿಗೆ ಅಧಿಕೃತ ಪರವಾನಗಿ ನೀಡುವಂತೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಸರೋಜನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವಪರಂಪರೆ ಪಟ್ಟಿ ನೆಪದಲ್ಲಿ ಆನೆಗೊಂದಿ ಭಾಗದಲ್ಲಿರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಖಂಡನೀಯ.
ಜನವಸತಿ ಪ್ರದೇಶದಲ್ಲಿರುವ ಹೋಂ ಸ್ಟೇಗಳು ಪ್ರವಾಸಿಗರು ಅದರಲ್ಲೂ ವಿದೇಶಿ ಪ್ರವಾಸಿಗರಿಗೆ ಸುರಕ್ಷತಾ ಕೇಂದ್ರಗಳಾಗಿದ್ದು, ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆ ಅನುಭವಿಸಲು ಅವಕಾಶವಿದೆ. ಹೋಂ ಸ್ಟೇಗಳ ವ್ಯವಸ್ಥೆ ಮತ್ತು ಸುರಕ್ಷತೆ ಬಗ್ಗೆ ದೇಶಿ, ವಿದೇಶಿ ಪ್ರವಾಸಿಗರು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತೇಜನಕ್ಕೂ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ಅನಧಿಕೃತ ನೆಪದಲ್ಲಿ ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ.
ಪ್ರವಾಸೋದ್ಯಮಕ್ಕೆ ಪೂರಕವಾದ ಹೋಂ ಸ್ಟೇಗಳನ್ನು ಸಕ್ರಮಗೊಳಿಸುವ ಕಾಯ್ದೆಯನ್ನು ಜಿಲ್ಲಾಡಳಿತ ಸಮರ್ಪಕ ಅನುಷ್ಠಾನಗೊಳಿಸಬೇಕಿದ್ದು, ಅಧಿಕೃತ ಪರವಾನಗಿ ನೀಡಿ ಉತ್ತೇಜನಕ್ಕೆ ಅವಕಾಶ ಕಲ್ಪಿಸಬೇಕಿದೆ. ಬಡ ಕುಟುಂಬಗಳಿಗೆ ಹೋಂ ಸ್ಟೇ ವರದಾನವಾಗಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದಲೂ ಸಹಕಾರಿಯಾಗಿದೆ ಎಂದರು.