ಯಲಬುರ್ಗಾದಲ್ಲಿ ಬೀರಲಿಂಗೇಶ್ವರ ಜಾತ್ರೋತ್ಸವದ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯನ್ನು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು. ಪ್ರಮುಖರಾದ ಫಕೀರಪ್ಪ ಹೆಬಸೂರು, ಬಸವಲಿಂಗಪ್ಪ ಭೂತೆ, ಕೆರಿಬಸಪ್ಪ ನಿಡಗುಂದಿ, ಶೇಖರಗೌಡ ಉಳ್ಳಾಗಡ್ಡಿ, ಸಿ.ಎಚ್.ಪೊಲೀಸ್‌ಪಾಟೀಲ್, ಹನುಮಂತಗೌಡ ಪಾಟೀಲ್, ಮಂಜುನಾಥ ಕಡೇಮನಿ ಇತರರಿದ್ದರು. 
ಕೊಪ್ಪಳ

ಹಾಲುಮತ ಸಮಾಜ ಶ್ರಮ-ಸಂಸ್ಕೃತಿ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಭಿಮತ
  • ಯಲಬುರ್ಗಾಶ್ರೀ ಬೀರಲಿಂಗೇಶ್ವರ ಜಾತ್ರೋತ್ಸವ
ಯಲಬುರ್ಗಾ: ಹಾಲುಮತ ಸಮಾಜ ಹಾಲಿನಷ್ಟೇ ಶ್ರೇಷ್ಠವಾಗಿದ್ದು, ಅತ್ಯಂತ ಪ್ರಾಮಾಣಿಕ, ವಿಶ್ವಾಸವುಳ್ಳ ಜನಾಂಗವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಾಲುಮತ ಸಮಾಜವು ಶ್ರಮ, ಸಂಸ್ಕೃತಿಯ ಪ್ರತೀಕ. ಸಮುದಾಯದ ಇತಿಹಾಸವು ಮನುಕುಲದ ಇತಿಹಾಸವಾಗಿದೆ. ಸಮಾಜದ ಹೆಮ್ಮೆಯ ನಾಯಕ ಸಿಎಂ ಸಿದ್ದರಾಮಯ್ಯ ಅವರು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ಇತ್ತೀಚೆಗೆ ಅಗಲಿದ ಕನಕಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಅಗಲಿಕೆ ಹಾಲುಮತ ಸಮಾಜಕ್ಕಷ್ಟೇ ಅಲ್ಲದೆ ಎಲ್ಲ ವರ್ಗಕ್ಕೂ ನಷ್ಟವಾಗಿದೆ ಎಂದರು.
ಸಿದ್ದರಾಮೇಶ್ವರ ಸ್ವಾಮೀಜಿ, ಬಾದಿಮನಾಳ ಕನಕಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸವೆಂದು ನಂಬಿ ಕೃಷಿ, ಕುರಿ ಸಾಕಣೆ, ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಲುಮತ ಸಮಾಜದ ಸಂಸ್ಕೃತಿ ಶ್ರೇಷ್ಠವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ನಿದ್ದೆಗೆಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಆಶಿಸಿದರು.
ರೇವಣಸಿದ್ದೇಶ್ವರ, ಬೀರಲಿಂಗೇಶ್ವರ ಮೂರ್ತಿಗಳಿಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ಗಂಗಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವೇದಮೂರ್ತಿ ದ್ಯಾಮಯ್ಯ ಗುರುವಿನ ಸಾನ್ನಿಧ್ಯವಹಿಸಿದ್ದರು. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರೇವಣೆಪ್ಪ ಹಿರೇಕುರುಬರ ಮಾತನಾಡಿದರು.