ಕಬ್ಬರಗಿ ಮಾಸ್ತೆಮ್ಮ ದೇವಿ ಜಾತ್ರೆ ನಿಮಿತ್ತ ನಡೆದ ಹಾಲುಗಂಬ ಏರುವ ಸ್ಪರ್ಧೆಯಲ್ಲಿ 62 ವರ್ಷದ ಶರಣಪ್ಪ ಗೊಲ್ಲರ ಕಂಬದ ತುದಿಗೆ ಏರಿರುವುದು. 
ಕೊಪ್ಪಳ

ಹಾಲುಗಂಬವೇರಿ ಸಾಹಸ ಮೆರೆದ ವೃದ್ಧ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕಬ್ಬರಗಿ ಮಾಸ್ತೆಮ್ಮ ದೇವಿ ಜಾತ್ರೆ ನಿಮಿತ್ತ ನಡೆದಿದ್ದ ಸ್ಪರ್ಧೆ
  • ಮನ್ನೇರಾಳ 62 ವರ್ಷದ ಶರಣಪ್ಪ ಗೊಲ್ಲರ ಜಯಶಾಲಿ
ಹನುಮಸಾಗರ: ಸಮೀಪದ ಕಬ್ಬರಗಿ ಮಾಸ್ತೆಮ್ಮ ದೇವಿ ಜಾತ್ರೆ ನಿಮಿತ್ತ ಮಂಗಳವಾರ ನಡೆದ ಹಾಲುಗಂಬ ಏರುವ ಸ್ಪರ್ಧೆಯಲ್ಲಿ ಮನ್ನೇರಾಳ 62 ವರ್ಷದ ಶರಣಪ್ಪ ಗೊಲ್ಲರ ಜಯಶಾಲಿಯಾಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಮೂರು ವರ್ಷಗಳಿಗೊಮ್ಮೆ ಜರುಗುವ ಜಾತ್ರೆಯಲ್ಲಿ ಹಾಲುಗಂಬ ಏರುವುದು ಪ್ರಮುಖ ಆಚರಣೆಗಳಲ್ಲಿ ಒಂದು. ಭಾನುವಾರ ಸಂಜೆ ಹಾಲುಗಂಬ ಏರುವ ಸ್ಪರ್ಧೆ ಪ್ರಾರಂಭವಾಗಿತ್ತು. ನೂರಾರು ಜನರು ಭಾಗವಹಿಸಿದ್ದರು. ನಾನು ಮುಂದು.. ತಾ ಮುಂದು.. ಎಂದು ಯುವಕರು ಹಾಲುಗಂಬ ಏರಲು ಯತ್ನಿಸಿದರು.
ಅಂತಿಮ ಗುರಿ ತಲುಪುವ ಮುನ್ನವೇ ಮರಳಿ ನೆಲಕ್ಕೆ ಅಪ್ಪಳಿಸುತ್ತಿದ್ದರು. ಎಷ್ಟೇ ಪ್ರಯತ್ನಿಸಿದರೂ ಕಂಬದ ತುದಿಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ, ಮಂಗಳವಾರ ಸಂಜೆ ಶರಣಪ್ಪ ಗೊಲ್ಲರ ಕಂಬದ ತುದಿ ತಲುಪಿ ಹಾಲುಗಂಬದ ಮೇಲೆ ಕುಳಿತವರಿಂದ ಕೊಬ್ಬರಿ ಪಡೆದುಕೊಂಡಾಗ ಸೇರಿದ್ದವರು ಕೇಕೆ, ಸೀಟಿ ಹಾಕಿ ಸಂಭ್ರಮಿಸಿದರು. ಯುವಕರಿಂದ ಸಾಧ್ಯವಾಗದ ಸಾಧನೆಯನ್ನು ವೃದ್ಧ ಮಾಡಿದ್ದನ್ನು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು.