ಬಂಡಿಹಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ಗುಳ್ಳವ್ವ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಯಲಬುರ್ಗಾ: ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಆಷಾಢ ಮಾಸದ ಅಂಗವಾಗಿ ಮುಂಗಾರಿನ ದೇವತೆ ಎಂದು ಆರಾಧಿಸಲ್ಪಡುವ ಗುಳ್ಳವ್ವ ದೇವಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಹಿಳೆಯರು ಕುಂಬಾರರಿಂದ ತಂದ ಕರಿಹಸಿ ಮಣ್ಣಿನ ಗುಳ್ಳವ್ವ ದೇವತೆ ಮೂರ್ತಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಹೂವು, ರಂಗೋಲಿ, ಗುಲಗಂಜಿ, ಕುಸುಬಿ ಹಾಗೂ ವಿವಿಧ ಧಾನ್ಯಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆರತಿ ಬೆಳಗಿ ಜನಪದ ಗೀತೆಗಳನ್ನು ಹಾಡುತ್ತಾ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಪ್ರಾರ್ಥಿಸಿದರು.
ಗುಳ್ಳವ್ವ ಹಬ್ಬವು ಉತ್ತರ ಕರ್ನಾಟಕದ ಜನಪದ ಸಂಸ್ಕೃತಿಯ ವಿಶಿಷ್ಟ ಆಚರಣೆಯಾಗಿದ್ದು, ರೈತ ಸಮುದಾಯದ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಮುಂಗಾರು ಉತ್ತಮವಾಗಿ ಸುರಿದು ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದಿಂದ ಈ ಹಬ್ಬ ಆಚರಿಸಲಾಗುತ್ತದೆ.
ಈ ನಿಮಿತ್ತ ಗ್ರಾಮದಲ್ಲಿ ಸಾಂಪ್ರದಾಯಿಕ ವಾತಾವರಣ ನಿರ್ಮಾಣವಾಗಿದ್ದು, ಹಿರಿಯರು ಮಕ್ಕಳಿಗೆ ಗುಳ್ಳವ್ವ ಹಬ್ಬದ ಮಹತ್ವ, ಆಚರಣೆ ಹಾಗೂ ಜನಪದ ಸಂಸ್ಕೃತಿ ಕುರಿತು ಮಾಹಿತಿ ನೀಡಿದರು. ಮಹಿಳೆಯರು ಮನೆಗಳಲ್ಲಿ ತಯಾರಿಸಿದ ನೈವೇದ್ಯವನ್ನು ದೇವತೆಗೆ ಸಮರ್ಪಿಸಿ ನಂತರ ಭಕ್ತರಿಗೆ ಪ್ರಸಾದ ವಿತರಿಸಿದರು. ಯುವತಿಯರು ಹಾಗೂ ಬಾಲಕಿಯರು ಜನಪದ ಗೀತೆಗಳನ್ನು ಹಾಡಿದ ದೃಶ್ಯ ಎಲ್ಲರ ಗಮನ ಸೆಳೆಯಿತು.