ಕುಷ್ಟಗಿ ಪಟ್ಟಣದ ಬಿಇಒ ಕಚೇರಿ ಹೊರನೋಟ. 
ಕೊಪ್ಪಳ

ಹಳ್ಳಿಗಳ ಶಾಲೆಗೆ ಅತಿಥಿಗಳೇ ಗತಿ

ಪ್ರಮುಖ ಮುಖ್ಯಾಂಶಗಳು

  • ಗುಣಮಟ್ಟದ ಶಿಕ್ಷಣಕ್ಕೆ ತೊಡಕು
  • ಖಾಸಗಿ ಸ್ಕೂಲ್‌ಗಳತ್ತ ಒಲವು
ದೇವರಾಜ ಎಂ.
ಕುಷ್ಟಗಿ: ಇದೇ ಮಾಸಾಂತ್ಯಕ್ಕೆ ಸರ್ಕಾರಿ ಶಾಲೆಗಳು ಪುನಾರಂಭವಾಗಲಿವೆ. ಆದರೆ, ತಾಲೂಕಿನ 220 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 693 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಾಯಂ ಶಿಕ್ಷಕರಿಲ್ಲದೆ ಈ ವರ್ಷವೂ ಅತಿಥಿ ಶಿಕ್ಷಕರೇ ಪಾಠ ಮಾಡಬೇಕಾದ ಸ್ಥಿತಿ ಇದೆ.
ಪ್ರತಿವರ್ಷ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗ ಕೊನೆಯ ಸ್ಥಾನದಲ್ಲಿರುತ್ತದೆ. ಏಳು ತಾಲೂಕುಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯೂ ಇದಕ್ಕೆ ಹೊರತಲ್ಲ. ನಂಜುಂಡಪ್ಪ ವರದಿ ಅನುಷ್ಠಾನದ ಹಿನ್ನೆಲೆಯಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಕುಷ್ಟಗಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಮಾರ್ಗದರ್ಶನ, ಬೋಧನೆ ಸಿಗದೆ ವಿದ್ಯಾರ್ಥಿಗಳ ಕಲಿಕೆ ಕುಂಠಿತಗೊಂಡಿದೆ.
ತಾಲೂಕಿನಲ್ಲಿ 220 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಹಳ್ಳಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕ ಹುದ್ದೆಗಳು ಖಾಲಿ ಇದ್ದರೂ ಭರ್ತಿಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯಾರ್ಥಿಗಳಿಂದಲೇ ಪಾಠ ಬೋಧನೆ ನಡೆಯುತ್ತಿದೆ. ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 1,581 ಶಿಕ್ಷಕರ ಹುದ್ದೆಗಳ ಪೈಕಿ 888 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಮುಖ್ಯ ಶಿಕ್ಷಕರು 10, ಮುಖ್ಯ ಶಿಕ್ಷಕರು 75, ಸಹ ಶಿಕ್ಷಕರು 373, ಪದವೀಧರ ಶಿಕ್ಷಕರು 163, ಶಾಲಾ ಮಾತಾ ಒಂದು, ದೈಹಿಕ ಶಿಕ್ಷಕರು 66, ವಿಶೇಷ ಶಿಕ್ಷಕರ ಐದು ಹುದ್ದೆ ಸೇರಿ ಒಟ್ಟು 693 ಪ್ರಾಥಮಿಕ ಶಾಲೆಗಳ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ 107 ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ನೂರಾರು ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಕ್ಷಣ ಸಿಗದೆ ಖಾಸಗಿ ಶಾಲೆಯತ್ತ ಹೋಗುತ್ತಿದ್ದಾರೆ.
"

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳಿಗೆ ಸರಿಯಾಗಿ ಶಿಕ್ಷಣ ದೊರೆಯುತ್ತಿಲ್ಲ. ಹಿಂದುಳಿದ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನಿಯೋಜಿಸುತ್ತಿಲ್ಲ. ಪ್ರತಿವರ್ಷ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವುದು ಶೋಚನೀಯ. ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು.

— ಅಮರೇಶ ಕಡಗದ ರಾಜ್ಯಾಧ್ಯಕ್ಷ, ಎಸ್‌ಎಫ್‌ಐ, ಲಿಂಗದಹಳ್ಳಿ
"

ಕುಷ್ಟಗಿ ತಾಲೂಕಿನ ಸರ್ಕಾರಿ ಹೈಸ್ಕೂಲ್ ಹಾಗೂ ಪ್ರೈಮರಿ ಶಾಲೆಯಲ್ಲಿ 600ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಶಿಕ್ಷಕರು ಖಾಲಿ ಇರುವ ಹುದ್ದೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಶಾಲೆಗಳನ್ನು ನಡೆಸಲಾಗುವುದು.

— ಉಮಾದೇವಿ ಬಸಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ, ಕುಷ್ಟಗಿ