gruhalakshmi scheme 
ಕೊಪ್ಪಳ

ಅನರ್ಹರ ಗೃಹಲಕ್ಷ್ಮಿಯರ ಪತ್ತೆ ಸವಾಲು

ಪ್ರಮುಖ ಮುಖ್ಯಾಂಶಗಳು

  • ಲಕ್ಷಕ್ಕೂ ಅಧಿಕ ಜನರಿಗೆ ಗ್ಯಾರಂಟಿ ಹಣ
  • ಸಾಲಕ್ಕೆ ಕಡಿತ ಮಾಡದಂತೆ ಬ್ಯಾಂಕ್​ಗಳಿಗೆ ಸೂಚನೆ
ಕೊಪ್ಪಳ: ರಾಜ್ಯದ ನಾರಿಯರಿಗೆ ಲಕ್ಷ್ಮಿ ಬಲ ನೀಡಿರುವಗೃಹಲಕ್ಷ್ಮಿಯೋಜನೆಯ ಅನರ್ಹರ ಪತ್ತೆ, ಪಡೆದ ಹಣ ವಸೂಲಾತಿ ಸರ್ಕಾರಕ್ಕೆ ಸವಾಲಾಗಿದೆ. ಮತ್ತೊಂದೆಡೆ ಖಾತೆಗೆ ಬರುವ ಮೊತ್ತಕ್ಕೆ ಬ್ಯಾಂಕ್​ ಸಾಲದ ನೆಪದಲ್ಲಿ ಕನ್ನ ಹಾಕುತ್ತಿದ್ದು, ಕಡಿತಗೊಳಿಸದಂತೆ ಸರ್ಕಾರ ಫಮಾರ್ನು ಹೊರಡಿಸಿದೆ.
ಬೆಲೆ ಏರಿಕೆ, ವಿವಿಧ ಯೋಜನೆಗಳಿಗೆ ಅನುದಾನ ಕಡಿತದಂತ ಲೋಪಗಳನ್ನು ಪಂಚ ಗ್ಯಾರಂಟಿ ಯೋಜನೆಗಳು ಸರಿದೂಗಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಬೂಸ್ಟ್​ ನೀಡುತ್ತಿವೆ. ಐದು ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಕೋಟ್ಯಂತರ ರೂ. ಅನುದಾನ ವ್ಯಯಿಸುತ್ತಿದ್ದು, ಸದ್ಬಳಕೆ ಮಾಡಿಕೊಂಡ ಅನೇಕರು ಉಪ ಕಸುಬು ಆರಂಭಿಸಿ ಜೀವನ ಕಂಡುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಪಾಲಿಗೆ ವರವಾಗಿದ್ದು, ನಿತ್ಯ ಜೀವನ ನಡೆಸಲು ಅನುಕೂಲಕರವಾಗಿವೆ. ರಾಜ್ಯಾದ್ಯಂತ 1.24 ಕೋಟಿ ಫಲಾನುಭವಿಗಳು ಯೋಜನೆ ಲಾಭ ಪಡೆಯುತ್ತಿದ್ದಾರೆ.
ಬಿಪಿಎಲ್​ ಕಾರ್ಡ್​ ನಲ್ಲಿನ ಮನೆ ಯಜಮಾನಿ ಖಾತೆಗೆ ನೇರವಾಗಿ ಪ್ರತಿ ತಿಂಗಳು ಎರಡು ಸಾವಿರ ರೂ.ಜಮಾ ಆಗುತ್ತಿದೆ. ಈಗಾಗಲೇ 30 ಕಂತುಗಳಲ್ಲಿ ಓರ್ವ ಫಲಾನುಭವಿಗೆ 60 ಸಾವಿರ ರೂ.ಮೊತ್ತ ಕೈ ಸೇರಿದೆ. ಮೂರು ವರ್ಷದ ಹಿಂದೆ ಯೋಜನೆ ಆರಂಭವಾಗಿದೆ. ನೋಂದಣಿ ಬಳಿಕ ಹಲವರು ಮೃತಪಟ್ಟಿದ್ದಾರೆ. ಕಳೆದ ಡಿಸೆಂಬರ್​ ಅಂತ್ಯದವರೆಗೆ ರಾಜ್ಯಾದ್ಯಂತ 2,47,554 ಜನ ಮೃತ ಹೊಂದಿರುವುದು ಪತ್ತೆಯಾಗಿದೆ. ಇವರಲ್ಲಿ 1,06,922 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಿರುವುದು ಬೆಳಕಿಗೆ ಬಂದಿದೆ. ಆ ಮೊತ್ತ ಮರಳಿ ಪಡೆಯುವಂತೆ ಸರ್ಕಾರ ಆಯಾ ಜಿಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಈ ಕೆಲಸವೇ ಸವಾಲಾಗಿದೆ.

114.53 ಕೋಟಿ ರೂ. ಪಾವತಿ

ಎರಡು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಮೃತರಾಗಿದ್ದು, 1,06,922 ಜನರ ಮರಣ ವಿವರ ಸಕಾಲಕ್ಕೆ ಲಭ್ಯವಾಗದ ಕಾರಣ ಹಲವು ತಿಂಗಳು ಅವರ ಖಾತೆಗೆ ನೇರವಾಗಿ ಹಣ ಡಿಬಿಟಿ ಆಗಿದೆ. ಆ ಮೊತ್ತ 114.53 ಕೋಟಿ ರೂ. ಇದ್ದು, ಆಯಾ ಜಿಲ್ಲಾವಾರು ಅನರ್ಹರ ಹೆಸರು ಹಾಗೂ ಖಾತೆಗೆ ಜಮಾ ಆದ ಮೊತ್ತ ಪ್ರಮಾಣ ವಿವರ ಕಳಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಆರು ಸಾವಿರ ಅನರ್ಹರ ಖಾತೆಗೆ ಹಣ ಪಾವತಿಯಾಗಿದೆ. ಆದರೆ, ಖಾತೆಗೆ ಬಂದ ಹಣವನ್ನು ಮರಣ ಹೊಂದಿದವರ ವಾರಸುದಾರರು ಈಗಾಗಲೇ ಬಳಕೆ ಮಾಡಿದ್ದಾರೆ. ಕುಟುಂಬದಲ್ಲಿ ನಾಲ್ಕೆ$ದು ಜನರಿದ್ದಲ್ಲಿ ಯಜಮಾನಿ ಮರಣ ಹೊಂದಿದರೂ ಬಾಕಿ ಮಹಿಳೆಯರ ಪೈಕಿ ಹಿರಿಯರು ಬಿಪಿಎಲ್​ ವಾರಸುದಾರರಾಗುತ್ತಿದ್ದಾರೆ. ಯೋಜನೆ ನಿಯಮಾನುಸಾರ ಅವರೂ ಗೃಹಲಕ್ಷ್ಮಿಗೆ ಅರ್ಹರಿದ್ದು ಹಣ ಪಡೆದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಇನ್ನು ಕೆಲವರು ಹಣ ಬಳಸಿಕೊಂಡಿದ್ದು, ಮತ್ತೆ ಪಾವತಿಸುವಂತೆ ಹೇಳುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಸಾಲ ಕಡಿತಕ್ಕೆ ಬ್ರೇಕ್​

ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಬರುವ ಮೊತ್ತವನ್ನು ಕೆಲ ಬ್ಯಾಂಕ್​ನವರು ಸಾಲದ ಮೊತ್ತಕ್ಕೆ ಕಡಿತ ಮಾಡುತ್ತಿದ್ದಾರೆ. ಇದರಿಂದ ಲಾನುಭವಿಗಳಿಗೆ ಯೋಜನೆ ಲಾಭ ದೊರೆಯುತ್ತಿಲ್ಲ. ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಬ್ಯಾಂಕರ್ಸ್​ ಸಭೆ ನಡೆಸಿ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿದ್ದು, ಗೃಹಲಕ್ಷ್ಮಿ ಮೊತ್ತ ಸಾಲಕ್ಕೆ ಕಡಿತ ಮಾಡದಂತೆ ತಾಕೀತು ಮಾಡಿದೆ. ಆಯಾ ಜಿಲ್ಲಾವಾರು ಸಭೆ ನಡೆಸಿ ಲೀಡ್​ ಬ್ಯಾಂಕ್​ ಮ್ಯಾನೇಜರ್​ಗಳ ಮೂಲಕ ಎಲ್ಲ ಬ್ಯಾಂಕ್​ಗಳಿಗೆ ಪತ್ರ ಬರೆದು ರ್ಮಾನು ಹೊರಡಿಸಲಾಗಿದೆ. ಒಂದೊಮ್ಮೆ ಹಣ ಕಡಿತ ಮಾಡಿದ್ದಲ್ಲಿ ಮರು ಜಮಾ ಮಾಡಲು ನಿರ್ದೇಶನ ನೀಡಲಾಗಿದೆ.