ಕನಕಗಿರಿಯ 8ನೇ ವಾರ್ಡ್‌ನ ಛಲವಾದಿ ಓಣಿಯಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕುಂದು-ಕೊರತೆ ಸಭೆಯಲ್ಲಿ ಪಿಐ ವಿ ನಾರಾಯಣ ಮಾತನಾಡಿದರು. ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ, ಪ್ರಮುಖರಾದ ಪರಸಪ್ಪ ಗುಂಡೂರು, ಪಾಂಡಪ್ಪ, ಕನಕಪ್ಪ ಮ್ಯಾಗಡೆ ಇತರರಿದ್ದರು. 
ಕೊಪ್ಪಳ

ಸಮಸ್ಯೆ ಏನೇ ಇರಲಿ ಗಮನಕ್ಕೆ ತನ್ನಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಪಿಐ ವಿ. ನಾರಾಯಣ ಸಲಹೆ
  • ದಲಿತರ ಕುಂದು-ಕೊರತೆ ಸಭೆ
ಕನಕಗಿರಿ: ದಲಿತರ ಕಾಲನಿಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸುವುದು ಪೊಲೀಸ್ ಇಲಾಖೆ ಜವಾಬ್ದಾರಿಯಾಗಿದೆ ಎಂದು ಪಿಐ ವಿ. ನಾರಾಯಣ ಹೇಳಿದರು.
ಪಟ್ಟಣದ 8ನೇ ವಾರ್ಡ್‌ನ ಛಲವಾದಿ ಓಣಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಲಿತರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಮೀಸಲು ಕ್ಷೇತ್ರವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅನೇಕ ಕಾಲನಿಗಳಿವೆ. ಅಲ್ಲಿರುವ ದಲಿತರಿಗೆ ಧನಿಯಾಗಬೇಕಾದ್ದರಿಂದ ದಲಿತರ ಸಭೆ ಏರ್ಪಡಿಸಿ ಅವರ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಕಾಲನಿಗಳಲ್ಲಿನ ಸಮಸ್ಯೆಗಳು, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಗಮನಕ್ಕೆ ತರಬೇಕು. ಇಲಾಖೆಗಳ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡಿದಲ್ಲಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಮಾತನಾಡಿ, ನಮ್ಮ ವಾರ್ಡ್ ಅತ್ಯಂತ ಹಿಂದುಳಿದಿದ್ದು, ಅತಿ ಹೆಚ್ಚು ಎಸ್‌ಸಿ ಜನಾಂಗದವರಿದ್ದೇವೆ. ಬಹುತೇಕರು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ಅನೇಕ ಸಮಸ್ಯೆಗಳು ಕಾಡುತ್ತಿವೆ. ಮಟ್ಕಾ, ಇಸ್ಪೀಟ್, ಮದ್ಯಪಾನದಂತಹ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಇವುಗಳಿಗೆ ದಾಸರಾಗುತ್ತಿರುವ ಕಾರ್ಮಿಕ ವರ್ಗದವರು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ದಲಿತರ ಸಮಸ್ಯೆಗಳಿಗೆ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಬೇಕು. ವಿದ್ಯಾವಂತ ಯುವಕರು ಹೆಚ್ಚಾಗಿದ್ದು, ಹೈಟೆಕ್ ಗ್ರಂಥಾಲಯದ ಅವಶ್ಯಕತೆ ಇದೆ ಎಂದರು.
ಪ್ರೊಬೆೇಷನರಿ ಪಿಎಸ್‌ಐ ಉಮೇಶ, ಮುಖ್ಯ ಪೇದೆ ಬೈಲಪ್ಪ, ಪೇದೆ ಲೋಹಿತ್, ಪ್ರಮುಖರಾದ ಪರಸಪ್ಪ ಗುಂಡೂರು, ಪಾಂಡಪ್ಪ, ಕನಕಪ್ಪ ಮ್ಯಾಗಡೆ, ಹನುಮಂತಪ್ಪ, ಕಂಠಿರಂಗ ಛಲವಾದಿ, ಅಮರೇಶ, ಮಲ್ಲಯ್ಯ ಇತರರಿದ್ದರು.