ಕೊಪ್ಪಳದ ಅಶೋಕ ವೃತ್ತದಲ್ಲಿ ಬಳಿ ಬೇಸಿಗೆ ತಾಪದಿಂದ ವಾಹನ ಸವಾರರಿಗೆ ನೆರಳು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆ ಕಿತ್ತುಹೋಗಿ ಗಾಳಿಗೆ ತೂರಾಡುತ್ತಿರುವುದು. 
ಕೊಪ್ಪಳ

ಸಿಗ್ನಲ್​ ಬಳಿ ಕಿತ್ತು ತೂರಾಡುತ್ತಿರುವ ಹಸಿರು ಹೊದಿಕೆ

ಪ್ರಮುಖ ಮುಖ್ಯಾಂಶಗಳು

  • ಅನಾಹುತಕ್ಕೂ ಮುನ್ನ ತೆರವುಗೊಳಿಸಲು ಆಗ್ರಹ
ಕೊಪ್ಪಳ : ನಗರದ ಬಸವೇಶ್ವರ ವೃತ್ತ ಹಾಗೂ ಅಶೋಕ ವೃತ್ತಗಳ ಸಿಗ್ನಲ್​ ಬಳಿ ಬೇಸಿಗೆಯ ತಾಪದಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನೆರಳು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆ ಕಿತ್ತುಹೋಗಿ ಕಳೆದ ಒಂದು ವಾರದಿಂದ ಗಾಳಿಗೆ ತೂರಾಡುತ್ತಿದ್ದು, ಅಪಾಯದ ಆತಂಕ ಸೃಷ್ಟಿಸಿದೆ.
ಮಳೆಗಾಲ ಆರಂಭವಾಗುತ್ತಿದ್ದು, ಬಲವಾದ ಗಾಳಿ ಮತ್ತು ಮಳೆಯ ಪರಿಣಾಮವಾಗಿ ಎರಡೂ ವೃತ್ತದಲ್ಲಿ ಹೊದಿಕೆಯ ಒಂದು ಭಾಗ ಕಿತ್ತು ರಸ್ತೆ ಮೇಲ್ಭಾಗದಲ್ಲಿ ನೇತಾಡುತ್ತಿದ್ದು, ಗಾಳಿಯ ವೇಗಕ್ಕೆ ತಕ್ಕಂತೆ ಅತ್ತಿತ್ತ ತೂರಾಡುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ಹಾಗೂ ಇತರೆ ವಾಹನ ಚಾಲಕರ ಗಮನ ಬೇರೆಡೆ ಸೆಳೆಯುವ ಸಾಧ್ಯತೆ ಇದೆ. ದ್ವಿಚಕ್ರ ವಾಹನ ಸವಾರನ ಮುಖಕ್ಕೆ ಹೊದಿಕೆ ತಾಗಿದರೆ ಅನಾಹುತ ಖಂಡಿತ, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಭೀತಿ ವ್ಯಕ್ತವಾಗಿದೆ.
ನಗರದ ಪ್ರಮುಖ ರಸ್ತೆಯಾಗಿರುವುದರಿಂದ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಿಶೇಷವಾಗಿ ಸಂಜೆ ವೇಳೆಯಲ್ಲಿ ವಾಹನ ದಟ್ಟಭಣೆ ಹೆಚ್ಚಾಗುವ ಕಾರಣ ಕಿತ್ತುಹೋದ ಹೊದಿಕೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ, ಗಾಳಿ ಹೆಚ್ಚಾದರೆ ಹೊದಿಕೆ ಸಂಪೂರ್ಣವಾಗಿ ರಸ್ತೆಗೆ ಬೀಳುವ ಸಾಧ್ಯತೆಯೂ ಇದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿದ್ದ ಈ ವ್ಯವಸ್ಥೆಯ ನಿರ್ವಹಣೆಯಲ್ಲಿ ನಗರಸಭೆ ರ್ನಿಲಕ್ಷ್ಯ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ ಹಲವು ದಿನಗಳಿಂದ ಹೊದಿಕೆ ಇದೇ ಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸುವ ಅಥವಾ ದುರಸ್ತಿ ಮಾಡುವ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಅನಾಹುತ ಸಂಭವಿಸುವ ಮೊದಲು ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಿತ್ತುಹೋದ ಹಸಿರು ಹೊದಿಕೆಯನ್ನು ತೆರವುಗೊಳಿಸಿ, ಸಂಚಾರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಬಸವೇಶ್ವರ ವೃತ್ತದಲ್ಲಿ ಕಿತ್ತಿರುವುದನ್ನು ಮಾತ್ರ ಖಂಡಿದ್ದೆ. ಅಶೋಕ ವೃತ್ತದಲ್ಲಿಯೂ ಕಿತ್ತಿರುವುದು ನನ್ನ ಗಮನಕ್ಕಿರಲಿಲ್ಲ. ತಕ್ಷಣ ಅದನ್ನು ಪರಿಶೀಲಿಸಿ ರಾತ್ರಿ ವೇಳೆ ಎರಡೂ ವೃತ್ತಗಳಲ್ಲಿ ನೆತಾಡುತ್ತಿರುವ ಹಸಿರು ಹೊದಿಕೆಯನ್ನು ತೆರವುಗೊಳಿಸಲು ಸೂಚಿಸುತ್ತೇನೆ.

— ಮಂಜುನಾಥ ಗುಂಡೂರ. ನಗರಸಭೆ ಪೌರಾಯುಕ್ತ ಕೊಪ್ಪಳ.
"

ಸಿಗ್ನಲ್​ ಬಳಿ ನೆರಳಿಗಾಗಿ ಹಾಕಿರುವ ಹಸಿರು ಹೊದಿಕೆ ಕಿತ್ತು ಗಾಳಿಗೆ ತೂರಾಡುತ್ತಿರುವುದು ಅಪಾಯಕಾರಿಯಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಗಮನವನ್ನು ಇದು ಬೇರೆಡೆ ಸೆಳೆಯುತ್ತಿದೆ. ಗಾಳಿ ಜೋರಾಗಿ ಬೀಸಿದಾಗ ಹೊದಿಕೆ ರಸ್ತೆಯ ಕಡೆಗೆ ಹಾರಾಡುವುದರಿಂದ ಆತಂಕ ಉಂಟಾಗುತ್ತಿದೆ. ಒಂದು ವೇಳೆ ಅದು ವಾಹನ ಸವಾರರ ಮುಖಕ್ಕೆ ತಾಗಿದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದಷ್ಟು ಬೇಗನೆ ಅದನ್ನು ತೆರವುಗೋಳಿಸಬೇಕು.

— ಪ್ರವಿಣ ಹೊಟ್ಟಿ ಕಾನೂನು ವಿದ್ಯಾರ್ಥಿ, ಕೊಪ್ಪಳ ಕುವೇಂಪು ನಗರ ನಿವಾಸಿ.