ಸಿದ್ದಾಪುರ ಶ್ರೀ ವೀರಪ್ಪಯ್ಯ ತಾತನ ಮಠದಲ್ಲಿ ತಪೋಕ್ಷೇತ್ರ ಕಣ್ವೆಕುಪ್ಪ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
- ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಅಭಿಮತ
- ಸಿದ್ದಾಪುರದಲ್ಲಿ ಇಷ್ಟಲಿಂಗ ಮಹಾಪೂಜೆ-ಧರ್ಮಸಭೆ
ಸಿದ್ದಾಪುರ: ಜೀವನದಲ್ಲಿ ಯಾರೂ ಕೆಟ್ಟ ಕೆಲಸಗಳನ್ನು ಮಾಡಬೇಡಿ. ಸತ್ಕಾರ್ಯಗಳನ್ನು ಮಾಡುವ ಮೂಲಕ ಬಾಳ್ವೆ ನಡೆಸಿದರೆ ಆ ಕಾರ್ಯಗಳೇ ನಮ್ಮನ್ನು ದೈವದ ರೂಪದಲ್ಲಿ ಕಾಯುತ್ತವೆ ಎಂದು ತಪೋಕ್ಷೇತ್ರ ಕಣ್ವೆಕುಪ್ಪ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಸಿದ್ದಾಪುರ ಹಿರೇಮಠ ಸಂಸ್ಕೃತಿ ಪ್ರತಿಷ್ಠಾನದಿಂದ ಸನಾತನ ಧರ್ಮ ಜಾಗೃತಿ ಅಭಿಯಾನ ಅಂಗವಾಗಿ ಲೋಕಕಲ್ಯಾಣಾರ್ಥ ಮತ್ತು ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಶ್ರೀ ವೀರಪ್ಪಯ್ಯ ತಾತನ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಮರೆಯಬಾರದು. ಹಿರಿಯರು, ಗುರು ಪರಂಪರೆ ಬಗ್ಗೆ ಗೌರವವಿರಬೇಕು. ನಮ್ಮ ಧರ್ಮದಲ್ಲಿ ಲಿಂಗ, ಭಸ್ಮ, ರುದ್ರಾಕ್ಷಿ ಎನ್ನುವ ಮೂರು ಲಾಂಛನಗಳಿವೆ. ಇವುಗಳನ್ನು ಪ್ರತಿದಿನ ಧಾರಣೆ ಮಾಡಬೇಕು. ಇದರಿಂದ ಪಾಪ ಕರ್ಮಗಳು ದೂರವಾಗಿ ಮನಃಶಾಂತಿ ದೊರೆಯುತ್ತದೆ. ರುದ್ರಾಕ್ಷಿ ಧಾರಣೆ ಮಾಡುವುದರಿಂದ ಒಂದು ಕೋಟಿ ಹಸುಗಳ ದಾನ ಮಾಡಿದ ಪುಣ್ಯ ದೊರೆಯುತ್ತದೆ. ಲಿಂಗ ಯಾವಗಲೂ ನಮ್ಮ ಜೊತೆಯೇ ಇರಬೇಕು. ಯಾರಿಗೂ ಕೊಡಬಾರದು. ದೇವರು ನಮಗೆ ಉಚಿತವಾಗಿ ನೀರು, ಗಾಳಿ ನೀಡಿದ್ದಾನೆ. ಹಾಗಾಗಿ ಪ್ರಕೃತಿಗೆ ಹಾನಿ ಉಂಟು ಮಾಡಬಾರದು. ಧರ್ಮವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗ್ರಾಮಸ್ಥರು ಸುಂದರವಾಗಿ ಧರ್ಮಸಭೆ ಆಯೋಜನೆ ಮಾಡಿದ್ದೀರಿ. ದೇವರು ನಿಮಗೆಲ್ಲ ಒಳಿತು ಮಾಡಲೆಂದು ಆಶೀರ್ವದಿಸಿದರು.
ದಾಸನಾಳ ಹಿರೇಮಠದ ಬಸವಣ್ಣಯ್ಯ ಸ್ವಾಮಿ, ಉಮೇಶ ಸ್ವಾಮಿ, ಶಿವಕುಮಾರ ಸ್ವಾಮಿ, ಗಣೇಶಯ್ಯ ಸ್ವಾಮಿ, ಮಹೇಶ ಸ್ವಾಮಿ, ಮಹಾದೇವಯ್ಯ ಸ್ವಾಮಿ ಹಾಗೂ ಗ್ರಾಮಸ್ಥರಿದ್ದರು.
ಶ್ರೀ ವೀರಪ್ಪಯ್ಯ ತಾತನ ಮಠದಲ್ಲಿ ಇಷ್ಟಲಿಂಗ ಪೂಜೆ, ಅಷ್ಟೋತ್ತರ, ಮಹಾ ಮೃತ್ಯುಂಜಯ ಜಪ, ರುದ್ರಾಭಿಷೇಕ, ಚಾಮುಂಡಿ ಬೀಜಕ್ಷಾರಿ ಮಂತ್ರ, ಮಹಾ ಮಂಗಳಾರತಿ ಕಾರ್ಯಕ್ರಮ ಜಗುಗಿದವು. ಬಳಿಕ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.