ಯಲಬುರ್ಗಾ ಶ್ರೀಗುರುರಾಘವೇಂದ್ರಸ್ವಾಮಿ ಮಠದ ಸುವರ್ಣ ಮಹೋತ್ಸವ ನಿಮಿತ್ತ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಠದ ಸೇವಾ ಸಮಿತಿ ಅಧ್ಯಕ್ಷ ಸುನೀಲ ಕುಲಕರ್ಣಿ, ಕಾರ್ಯದರ್ಶಿ ಸುಧೀರ ಕೊರ್ಲಳ್ಳಿ, ಅಪ್ಪಣ್ಣ ಜೋಶಿ, ಗುರುರಾಜ ಬಂಡಿಹಾಳ, ಗುರುರಾಜ ಪುರೋಹಿತ, ಜಗನ್ನಾಥ ದೇಸಾಯಿ, ಶೇಷಗಿರಿರಾವ್ ಕುಲಕರ್ಣಿ ಇತರರಿದ್ದರು.
- ಸೇವಾ ಸಮಿತಿ ಅಧ್ಯಕ್ಷ ಸುನೀಲ ಕುಲಕರ್ಣಿ ಮಾಹಿತಿ
- ಯಲಬುರ್ಗಾ ರಾಘವೇಂದ್ರಸ್ವಾಮಿ ಮಠ ಸುವರ್ಣ ಮಹೋತ್ಸವ
ಯಲಬುರ್ಗಾ: ಶ್ರೀಗುರು ರಾಘವೇಂದ್ರಸ್ವಾಮಿ ಮಠದ ಸುವರ್ಣ ಮಹೋತ್ಸವ ಏ.10ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದ್ದು, ಸರ್ವ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಠದ ಸೇವಾ ಸಮಿತಿ ಅಧ್ಯಕ್ಷ ಸುನೀಲ ಕುಲಕರ್ಣಿ ಮನವಿ ಮಾಡಿದರು.
ಪಟ್ಟಣದ ಶ್ರೀಗುರು ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುವರ್ಣ ಮಹೋತ್ಸವ ನಿಮಿತ್ತ ನಾನಾ ಧಾರ್ಮಿಕ ಕೈಂಕರ್ಯ ಆಯೋಜಿಸಲಾಗಿದ್ದು, ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಆಗಮಿಸಲಿದ್ದಾರೆ ಎಂದರು.
ಏ.10ರಂದು ಅಷ್ಟಮಿ ಪ್ರಯುಕ್ತ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಗಣಹೋಮ, ನೈವೇದ್ಯ, ಹಸ್ತೋದಕ ಹಾಗೂ ತೀರ್ಥ ಪ್ರಸಾದ ನಡೆಯಲಿದೆ. ಸಂಜೆ 6 ಗಂಟೆಗೆ ಪಾಂಡುರಂಗ ದೇವಸ್ಥಾನದಿಂದ ಮಠದವರೆಗೆ ಶ್ರೀಪಾದಂಗಳವರ ಶೋಭಾಯಾತ್ರೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಏ.11ರಂದು ಶ್ರೀಪಾದಂಗಳವರ ಸಾಮೂಹಿಕ ಪಾದಪೂಜೆ, ತಪ್ತ ಮುದ್ರಾಧಾರಣೆ, ಸಂಪೋಕ್ಷಣ ಹೋಮ, ಕುಂಭಾಭಿಷೇಕ, ಫಲ-ಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಏ.12ರ ದಶಮಿ ಪ್ರಯುಕ್ತ ಉಪನ್ಯಾಸ, ವ್ಯಾಸವಾಣಿ, ದಾಸವಾಣಿ, ಸನ್ಮಾನ ಕಾರ್ಯಕ್ರಮಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸೇವಾ ಸಮಿತಿ ಕಾರ್ಯದರ್ಶಿ ಸುಧೀರ ಕೊರ್ಲಳ್ಳಿ ಮಾತನಾಡಿ, ಸ್ಥಳೀಯ ಮಠಕ್ಕೂ ಮಂತ್ರಾಲಯ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, 5ರಿಂದ 7 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.