ಗಂಗಾವತಿ ಬಾಲಕರ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಸರ್ವ ಯೋಗ, ಧ್ಯಾನ ಆಧ್ಯಾತ್ಮ ಬಳಗ ಮತ್ತು ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರಿದ್ದರು.
- ಶಾಸಕ ಗಾಲಿ ಜನಾರ್ದನರೆಡ್ಡಿ ಅಭಿಪ್ರಾಯ
- ಅಂತಾರಾಷ್ಟ್ರೀಯ ಯೋಗ ದಿನ
ಗಂಗಾವತಿ: ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಆಡಳಿತದಿಂದ ದೇಸಿ ಸಂಸ್ಕೃತಿ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಹಲವು ದೇಶಗಳಲ್ಲಿ ಯೋಗಾಭ್ಯಾಸ ದೈನಂದಿನ ಕರ್ತವ್ಯದಲ್ಲಿ ಒಂದಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಬಾಲಕರ ಸ.ಪ.ಪೂ. ಕಾಲೇಜು ಮೈದಾನದಲ್ಲಿ ಸರ್ವ ಯೋಗ, ಧ್ಯಾನ ಆಧ್ಯಾತ್ಮ ಬಳಗ ಮತ್ತು ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ಭಾಗ್ಯಕ್ಕೆ ಯೋಗ ಪೂರಕವಾಗಿದ್ದು, ಪ್ರತಿಯೊಬ್ಬರು ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದರು.
ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಸ್ವಸ್ಥ ಆರೋಗ್ಯ ಮತ್ತು ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ರೂಢಿಸಿಕೊಳ್ಳಬೇಕಿದ್ದು, ಯೋಗದಿಂದ ಹಲವು ರೋಗ ದೂರ ಮಾಡಬಹುದು ಎಂದು ತಿಳಿಸಿದರು. ಪತಂಜಲಿ ಯೋಗ ಸಮಿತಿ ರಾಜ್ಯ ಸದಸ್ಯ ಡಾ.ಎಸ್.ಬಿ.ಹಂದ್ರಾಳ್, ಉಪನ್ಯಾಸಕಿ ಮಹೇಶ್ವರಿ, ತರಬೇತುದಾರ ಕಿರಣಕುಮಾರ ಯೋಗಾಭ್ಯಾಸದ ಪ್ರಾತ್ಯಕ್ಷಿಕೆ ನೀಡಿದರು. ಸ್ಪೂರ್ತಿ ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮತ್ತು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ನಿತಿಕಾ ಅವರಿಂದ ಯೋಗ ಪ್ರದರ್ಶನ ನಡೆಯಿತು.
ಮಾಜಿ ಸಂಸದ ಎಸ್.ಶಿವರಾಮಗೌಡ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ತಹಸೀಲ್ದಾರ್ ಯು.ವಸಂತಕುಮಾರಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಯೋಗ ಸಮಿತಿ ಸಂಚಾಲಕರಾದ ರಘುನಾಥ ಪವಾರ್, ನೂಲ್ವಿ ಮಲ್ಲಿಕಾರ್ಜುನ, ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥ ಡಾ.ಬಸವರಾಜ ಸವಡಿ, ವಕೀಲ ಎಸ್.ಸೋಮನಾಥ ಪಟ್ಟಣಶೆಟ್ಟಿ ಇತರರಿದ್ದರು.
ಲಿಟಲ್ ಹಾರ್ಟ್ಸ್ ಸ್ಕೂಲ್
ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಪ್ರಾಣಾಯಮ ಮತ್ತು ಯೋಗಾಭ್ಯಾಸ ಪ್ರದರ್ಶನ ನೀಡಿದರು. ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ ಮಾತನಾಡಿ, ಅಧುನಿಕ ಜಗತ್ತಿನಲ್ಲಿ ಆರೋಗ್ಯ ಕಾಳಜಿ ಕಡಿಮೆಯಾಗುತ್ತಿದ್ದು, ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು. ದೈಹಿಕಶಿಕ್ಷಣ ಶಿಕ್ಷಕರಾದ ಭಾನುಪ್ರಸಾದ, ಛತ್ರಪ್ಪ ಇತರರಿದ್ದರು.
ಆರೋನ್ ಮಿರಜಕರ್ ಶಾಲೆ
ನಗರದ ಹೊಸಳ್ಳಿ ರಸ್ತೆಯ ಆರೋನ್ ಮಿರಜಕರ್ ಶಾಲೆಯಲ್ಲಿ ಸ್ನೇಹ ಬಳಗ ಯೋಗ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಆರೋಗ್ಯ ವೃದ್ಧಿಗಾಗಿ ಯೋಗ ಪರಿಕಲ್ಪನೆಯಡಿ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ತರಬೇತುದಾರರಾದ ವೀರೇಶ ಹಿರೇಮಠ, ಆನಂದ ಪಟ್ಟಣಶೆಟ್ಟಿ ಯೋಗ ಪ್ರದರ್ಶನ ನೀಡಿದರು. ಸಂಸ್ಥೆ ಕಾರ್ಯದರ್ಶಿ ರುಬೀನ್ ಮಿರಜ್ಕರ್, ಮುಖ್ಯಶಿಕ್ಷಕ ಮಂಜುನಾಥ ನಾಯಕ ಇತರರಿದ್ದರು.