ಹನುಮಸಾಗರ ಪಪಂ ಕಚೇರಿ ಮುಂದೆ ಸೋಮವಾರ ಅಲೆಮಾರಿ ಜನಾಂಗದವರು ವಿವಿಧ ವೇಷಧರಿಸಿ ಪ್ರತಿಭಟನೆ ನಡೆಸಿದರು. 
ಕೊಪ್ಪಳ

ನಮಗೆ ವಾಸ ಮಾಡಲು ನಿವೇಶನ ನೀಡಿ

ನರೇಶ್ ಕುಮಾರ್

ಹನುಮಸಾಗರ: 

ನಿವೇಶನ ನೀಡಬೇಕೆಂದು ಒತ್ತಾಯಿಸಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಎಸ್ಸಿ-ಎಸ್ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದ ಮುಖಂಡರು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. 

ಸುಮಾರು 50 ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿದ್ದೇವೆ. ನಮಗೆ ವಾಸಿಸಲು ಸೂಕ್ತ ಸೂರಿಲ್ಲ. ಇದರಿಂದಾಗಿ ವಿವಿಧ ಸರ್ಕಾರಿ ಜಾಗ, ಖಾಸಗಿ ವ್ಯಕ್ತಿಗಳ ನಿವೇಶನಗಳಲ್ಲಿ ಗುಡಿಸಲು, ಟೆಂಟ್ ಹಾಕಿಕೊಂಡಿದ್ದೇವೆ. ನಿತ್ಯ ಹಾವು, ಚೇಳುಗಳ ಭಯದಲ್ಲಿ ಕಾಲ ಕಳೆಯುತ್ತಿದ್ದೇವೆ. ನಮ್ಮ ಎಲ್ಲ ದಾಖಲೆಗಳಲ್ಲಿ ನಾವು ಇಲ್ಲಿಯವರೇ ಎಂದು ನಮೂದಿಸಲಾಗಿದೆ. ನಮಗೆ ವಾಸಿಸಲು ನಿವೇಶನ ನೀಡಿ, ಗುಂಪು ಮನೆಗಳನ್ನು ನಿರ್ಮಿಸಿಕೊಡಲು ಅನೇಕ ಸಲ ಪಪಂಗೆ ಮನವಿ ಸಲ್ಲಿಸಿದ್ದೇವೆ. ಈಗಾಗಲೇ ತಾವರಗೇರಾ, ಮೆಣೇಧಾಳ ಗ್ರಾಮದಲ್ಲಿ ನಮ್ಮ ಸಮುದಾಯದವರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗಿದೆ. ಆದರೆ, ಇಲ್ಲಿ ನಮ್ಮ ಗೋಳನ್ನು ಯಾರು ಕೇಳುತ್ತಿಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ತುಘಲಪ್ಪ ದೇಸಾಯಿ ಮಾತನಾಡಿ, ಅಲೆಮಾರಿ ಜನಾಂಗದವರು ವಾಸಿಸುವ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿನ ವಾಸ್ತವ ಸ್ಥಿತಿ, ಜನರಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಅಗತ್ಯ ಬಿದ್ದರೆ ಮತ್ತೆ ವರದಿ ಸಲ್ಲಿಸಲಾಗುವುದು ಎಂದರು. 
ಗದ್ದಲದ ವಾತಾವರಣ: ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಪಂ ಮಾಜಿ ಸದಸ್ಯರು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ. ನಿಮಗೆ ಗ್ರಾಪಂ ಅವಧಿಯಲ್ಲಿ ನಿವೇಶನ ನೀಡಲಾಗಿತ್ತು. ಅದನ್ನು ಬೇರೆಯವರಿಗೆ ಮಾರಾಟ ಮಾಡಿ, ಈಗ ಮತ್ತೆ ನಿವೇಶ ನೀಡಿ ಎನ್ನುತ್ತಿದ್ದೀರಾ ಎಂದಾಗ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
"

ನಿವೇಶನ ನೀಡಲು ಅಲೆಮಾರಿ ಸಮುದಾಯದವರಿಂದ ಮನವಿ ಸ್ವೀಕರಿಸಿದ್ದು, ಡಿಸಿ ಗಮನಕ್ಕೆ ತರಲಾಗುವುದು. ಈ ಹಿಂದೆ ಗ್ರಾಪಂ ಅವಧಿಯಲ್ಲಿ ಕೆಲವರಿಗೆ ನಿವೇಶನ ನೀಡಿದ್ದು, ಉಳಿದವರಿಗೆ ನಿವೇಶನ ನೀಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

— ರೆಡ್ಡಿ ರಾಯನಗೌಡ ಪಪಂ ಮುಖ್ಯಾಧಿಕಾರಿ ಹನುಮಸಾಗರ