ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹನುಮೇಶ ಎಚ್. ಮುರಡಿ, ಪ್ರಚಾರ ಸಮಿತಿ ಅಧ್ಯಕ್ಷ ಎ.ವಿ. ಕಣವಿ, ಪದಾಧಿಕಾರಿ ಆಕಾಂಕ್ಷಿಗಳಾದ ಅಂದಾನಗೌಡ ಎಸ್. ಮಾಲಿಪಾಟೀಲ, ಚಿದಾನಂದಗೌಡ ಎಂ. ಪೋಲಿಸ್ ಪಾಟೀಲ್, ಬಸವರಾಜ ಹೆಚ್. ಮೇಲುಸಕ್ಕರಿ, ವೀಣಾ ಎಸ್. ವಾಲ್ಮೀಕಿ ಇದ್ದರು.
ಕೊಪ್ಪಳ : ನನಗೆ ಅನುಭವವಿದೆ. ಅಭಿವೃದ್ಧಿ ಮತ್ತು ಸೇವೆ ಮಾಡಲು ಅವಕಾಶ ನೀಡಿದರೆ ವಕೀಲರ ಸಂಘವನ್ನು ಮತ್ತಷ್ಟು ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹನುಮೇಶ ಎಚ್. ಮುರಡಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಅವಧಿಯಲ್ಲಿ ವಕೀಲರ ಕುಟುಂಬಗಳಿಗೆ ಗ್ರೂಪ್ ಇನ್ಸೂರೆನ್ಸ್, ಯುವ ವಕೀಲರಿಗೆ ಕಾನೂನು ಕಾರ್ಯಾಗಾರ, ಮಹಿಳಾ ವಕೀಲರಿಗೆ ಅಗತ್ಯ ಸೌಲಭ್ಯ, ಸಂಘದ ಗ್ರಂಥಾಲಯದ ಡಿಜಿಟಲೀಕರಣ, ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಪೂರ್ಣಗೊಳಿಸುವುದು, ಪುರುಷ ಹಾಗೂ ಮಹಿಳಾ ವಕೀಲರಿಗೆ ಪ್ರತ್ಯೇಕ ಸಭಾಂಗಣ ನಿಮಾರ್ಣ, ವಕೀಲರ ಸಹಕಾರ ಸಂಘ ಸ್ಥಾಪನೆ ಹಾಗೂ ಹೊಸ ವಕೀಲರಿಗೆ ಸರ್ಕಾರದ ಶಿಷ್ಯವೇತನ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುವುದಾಗಿ ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, 2019&2021ರ ಅವಧಿಯಲ್ಲಿ ಮುರಡಿ ಅವರ ಅಧ್ಯಕ್ಷತೆಯಲ್ಲಿ 70 ಲಕ್ಷ ರೂ. ವೆಚ್ಚದ ಸುಸಜ್ಜಿತ ಪ್ಲಾಟ್ಫಾಮ್ರ್ ನಿಮಾರ್ಣ, ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ಧಿ, ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅಗತ್ಯ ಪ್ರಾಥಮಿಕ ಕಾರ್ಯಗಳು ಹಾಗೂ ರಾಜ್ಯಮಟ್ಟದ ಕಾನೂನು ಕಾರ್ಯಾಗಾರಗಳ ಯಶಸ್ವಿ ಆಯೋಜನೆ ನಡೆದಿವೆ. ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮತ್ತೊಮ್ಮೆ ಅವರಿಗೆ ಅವಕಾಶ ನೀಡುವಂತೆ ವಕೀಲರಲ್ಲಿ ಮನವಿ ಮಾಡಿದರು.
ಉಪಾಧ್ಯಕ್ಷ ಅಭ್ಯರ್ಥಿ ಅಂದಾನಗೌಡ ಎಸ್. ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಚಿದಾನಂದಗೌಡ ಎಂ. ಪೋಲಿಸ್ ಪಾಟೀಲ್, ಜಂಟಿ ಕಾರ್ಯದರ್ಶಿ ಅಭ್ಯರ್ಥಿ ಬಸವರಾಜ ಹೆಚ್. ಮೇಲುಸಕ್ಕರಿ ಹಾಗೂ ಖಜಾಂಚಿ ಅಭ್ಯರ್ಥಿ ವೀಣಾ ಎಸ್. ವಾಲ್ಮೀಕಿ ಇದ್ದರು.