ಕನಕಗಿರಿ ತಾಪಂ ಕಚೇರಿಯಲ್ಲಿ ವಿವಿಧ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ ತಾಲೂಕಿನ ಪಿಡಿಒ ಬಸವರಾಜ ಸಂಕನಾಳ, ಕಾರ್ಯದರ್ಶಿ ಶಿವರಾಜ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ತಾಪಂ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ, ತಾಲೂಕು ಯೋಜನಾಧಿಕಾರಿ ಡಾ.ಹುಲುಗಪ್ಪ ಇತರರಿದ್ದರು.
ಕನಕಗಿರಿ: ಕರವಸೂಲಿಯಲ್ಲಿ ತಾಲೂಕಿನ ಪ್ರಗತಿ ಕಡಿಮೆಯಿದ್ದು, ಎಲ್ಲ ಗ್ರಾಪಂ ಸಿಬ್ಬಂದಿ ಕರವಸೂಲಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಗತಿ ಸಾಧಿಸಿ ಎಂದು ತಾಪಂ ಇಒ ಕೆ.ರಾಜಶೇಖರ್ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳು ತಮ್ಮ ಸಿಬ್ಬಂದಿಯೊಂದಿಗೆ ಮನೆ ಮನೆ ಭೇಟಿ ನೀಡಿ ಕರವಸೂಲಿ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿನ ಪೈಪ್‌ಲೈನ್ ಸೋರಿಕೆ ಇದ್ದಲ್ಲಿ ದುರಸ್ತಿಗೊಳಿಸಿ. ಎಫ್‌ಟಿಕೆ ಕಿಟ್ ಮೂಲಕ ನೀರನ್ನು ಪರೀಕ್ಷಿಸಿ ಜತೆಗೆ ನೀರಿನ ಟ್ಯಾಂಕರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಎಂದರು.
ಘನತ್ಯಾಜ್ಯ ವಿಲೇವಾರಿ ಘಟಕ, ಉದ್ಯೋಗ ಖಾತ್ರಿ ಯೋಜನೆ, ಮಕ್ಕಳ ಗ್ರಾಮಸಭೆ, ಸಾಮಾನ್ಯ ಸಭೆ, ಸಿಬ್ಬಂದಿ ವೇತನ, ಇ-ಹಾಜರಾತಿ, ಸಾಮಾಜಿಕ ಲೆಕ್ಕಪರಿಶೋಧನೆ, ಅಡಹಾಕ್ ಸಭೆ ಪ್ರಗತಿ, ಕಾಯಕ ಗ್ರಾಮ, ಕಾನೂನು ಸೇವಾ, ಪ್ರಾಧಿಕಾರ ಜಾಗೃತಿ ಕಾರ್ಯಕ್ರಮ, ಕರವಸೂಲಾತಿ, ಚಕ್ಕರ್ ಲಾಗಿನ್ ಹಾಗೂ ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದರು.
ವಿವಿಧ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ ಪಿಡಿಒ, ಕಾರ್ಯದರ್ಶಿ, ಡಿಇಒ, ಕರವಸೂಲಿಗಾರರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ, ತಾಲೂಕು ಯೋಜನಾಧಿಕಾರಿ ಡಾ.ಹುಲುಗಪ್ಪ, ಪಿಡಿಒ ಗಳಾದ ಬಸವರಾಜ ಸಂಕನಾಳ, ಮಲ್ಲಿಕಾರ್ಜುನ, ಅಮರೇಶ ಇತರರಿದ್ದರು.