ಕುಷ್ಟಗಿಯಲ್ಲಿ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಮನವಿ ಸಲ್ಲಿಸಿದರು. ಸಂಘಟನೆ ತಾಲೂಕಾಧ್ಯಕ್ಷ ಬಿ.ಜಿ.ಶರಣಪ್ಪ, ಕಾರ್ಯದರ್ಶಿ ಮುತ್ತಪ್ಪ ಭೋವಿ, ಸಂಘಟಕರಾದ ಹನುಮಪ್ಪ ಭೋವಿ, ಪರುಶು ಹಾದಿಮನಿ ಇದ್ದರು.
- ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘ ಒತ್ತಾಯ
- ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಮನವಿ
ಕುಷ್ಟಗಿ: ತಾಲೂಕಿನ ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ಪದಾಧಿಕಾಗಳು ಬುಧವಾರ ಮನವಿ ಸಲ್ಲಿಸಿದರು.
ಸಂಘಟನೆ ತಾಲೂಕಾಧ್ಯಕ್ಷ ಬಿ.ಜಿ.ಶರಣಪ್ಪ ಮಾತನಾಡಿ, 2026ರ ಜೂ.8ರೊಳಗೆ ಹಾಬಲಕಟ್ಟಿ ಗ್ರಾಮದ ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಈಗಾಗಲೇ ಅಗತ್ಯ ದಾಖಲೆಗಳನ್ನು ನೀಡಲಾಗಿದೆ. 1950ರಲ್ಲಿ ಮೂಲಭೋವಿ ಎಂದು ದಾಖಲಾತಿಗಳಲ್ಲಿದೆ.
1944ರಲ್ಲಿ ವಡ್ಡರ್ ಸಮುದಾಯದವರು ಬೊಯಿ ಬದಲಾಯಿಸಿಕೊಂಡ ಗೆಜೆಟ್ ಗಮನಿಸಬೇಕು. 1950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬಂದಾಗ 2002ರಲ್ಲಿ ಭೋವಿ ಪರ್ಯಾಯ ಪದವಾಗಿ ಸೇರಿಕೊಂಡಿದೆ. ಶಾಲೆಗಳು ಆರಂಭವಾಗುತ್ತಿದ್ದು, ಸಮಾಜದವರಿಗೆ ತ್ವರಿತವಾಗಿ ಜಾತಿ ಪ್ರಮಾಣ ಪತ್ರ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಕಾರ್ಯದರ್ಶಿ ಮುತ್ತಪ್ಪ ಭೋವಿ, ಸಂಘಟಕರಾದ ಹನ್ಮಪ್ಪ ಭೋವಿ, ಪರುಶು ಹಾದಿಮನಿ, ಪವಾಡೆಪ್ಪ ಜಿಂಗಿ, ಶರಣಪ್ಪ ಭೋವಿ ಇತರರಿದ್ದರು.