ಕೊಪ್ಪಳದ ಗಿಣಿಗೇರ ಗ್ರಾಮದ ಕೆರೆ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವಿಮೆ ನೋಂದಣಿ ಕುರಿತು ಮಾಹಿತಿ ನೀಡಿದರು.
ಕೊಪ್ಪಳ : ಪ್ರತಿಯೊಬ್ಬ ಕೂಲಿಕಾರರು ಕೂಲಿ ಕೆಲಸದ ಜೊತೆಗೆ ಸರ್ಕಾರದ ವಿಮೆ ಯೋಜನೆಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹೇಳಿದರು.
ತಾಲೂಕಿನ ಗಿಣಿಗೇರಾದ ಕೆರೆ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು.
ಪ್ರತಿ ಮನುಷ್ಯನಿಗೆ ದಿನಕ್ಕೆ 370 ಕೂಲಿ ನಿಗದಿಪಡಿಸಲಾಗಿದ್ದು, 6 ಅಡಿ ಉದ್ದ, 6 ಅಡಿ ಅಗಲ ಹಾಗೂ 1 ಅಡಿ ಆಳದಲ್ಲಿ ಮಣ್ಣನ್ನು ಅಗೆದು ನಿಗದಿತ ಪ್ರಮಾಣದ ಕೆಲಸ ಪೂರ್ಣಗೊಳಿಸಿದರೆ ಸಂಪೂರ್ಣ ಕೂಲಿ ಪಡೆಯಬಹುದು. ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಲಿಕಾರರು ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಜಾಬ್ ಕಾರ್ಡ್ ಬಳಸಿ ನಮೂನೆ-6 ಸಲ್ಲಿಸುವ ಮೂಲಕ ಕೆಲಸ ಪಡೆಯಬೇಕು. ಏಪ್ರಿಲ್ ರಿಂದ ಜೂನ್ ವರೆಗೆ 90 ದಿನಗಳ ಉದ್ಯೋಗವನ್ನು ಪಡೆಯಬಹುದು. ಕೂಲಿ ಹಣದಿಂದ ಮಕ್ಕಳ ಶಿಕ್ಷಣ ವೆಚ್ಚ, ಸ್ಪರ್ಧಾತ್ಮಕ ಪರೀಕ್ಷಾ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಸಹಾಯವಾಗುತ್ತದೆ. ಎಲ್ಲಾ ಕೂಲಿಕಾರರು ಪಿಎಂಜೆಜೆಬಿವೈ ಮತ್ತು ಪಿಎಂಎಸ್ಬಿವೈ ವಿಮೆ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳುವುದರಿಂದ ಆರ್ಥಿಕ ಭದ್ರತೆ ದೊರೆಯುತ್ತದೆ ಎಂದು ತಿಳಿಸಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ , ಗ್ರಾಮ ಪಂಚಾಯತಿ ಡಿಇಒ ರಾಜಾಭಕ್ಷಿ ಪಾಯಪ್ಪನವರ, ಹನಮೇಶ ಹೋಸುರು, ರುದ್ರೇಶ ಬಳಿಗಾರ, ಶಿವಕುಮಾರ, ಮಾರುತಿ, ಶ್ರೀದೇವಿ ಧರ್ಮಪುರ, ಬಸಮ್ಮ ಬಗನಾಳ, ಶಾರದಾ ಗೋಡೆಕರ್ ಇತರರಿದ್ದರು.