ಕೊಪ್ಪಳ ಕ್ರಿಕೆಟ್ ಕ್ಲಬ್ನಿಂದ ಆಯೋಜಿಸಿದ್ದ ಎರಡು ತಿಂಗಳ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ, ಕ್ರಿಕೆಟ್ ಕ್ಲಬ್ ತರಬೇತಿದಾರ ಫೈರೋಜ್ ಅಲಿ ಇದ್ದರು.
ಕೊಪ್ಪಳ : ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಯುವಕರು ಉತ್ತಮ ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಮುತ್ತಣ್ಣ ಸವರಗೋಳ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಕ್ರಿಕೆಟ್ ಕ್ಲಬ್ನಿಂದ ಮಂಗಳವಾರ ಆಯೋಜಿಸಿದ್ದ ಎರಡು ತಿಂಗಳ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ, ಆರೋಗ್ಯದ ದೃಷ್ಟಿಯಿಂದ ಕ್ರೀಡೆಯೂ ಅಷ್ಟೇ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಐಎಎಸ್, ಐಪಿಎಸ್, ವೈದ್ಯರು ಅಥವಾ ಇಂಜಿನಿಯರ್ಗಳಾಗಲು ಸಾಧ್ಯವಿಲ್ಲ. ಕ್ರೀಡಾ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿ ಹೆಸರು ಗಳಿಸಿರುವ ಅನೇಕ ಉದಾಹರಣೆಗಳಿವೆ. ಪಾಲಕರು ಮಕ್ಕಳ ಮೇಲೆ ಕೇವಲ ಓದಿನ ಒತ್ತಡ ಹಾಕದೆ, ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ ಮಾತನಾಡಿ, ಕ್ರೀಡಾ ಇಲಾಖೆಯಿಂದಲೂ ಬೇಸಿಗೆ ಅವಧಿಯಲ್ಲಿ ವಿವಿಧ ಕ್ರೀಡಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಯುವಕರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರಿಕೆಟ್, ಹಾಕಿ, ಶಟಲ್ ಬ್ಯಾಡ್ಮಿಂಟನ್, ಈಜು, ವಾಲಿಬಾಲ್ ಹಾಗೂ ಬಾಸ್ಕೆಟ್ಬಾಲ್ ಸೇರಿದಂತೆ ಯಾವುದಾದರೂ ಒಂದು ಕ್ರೀಡೆಯನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಬೇಸಿಗೆ ಶಿಬಿರದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಉತ್ತಮ ಬ್ಯಾಟ್ಸ್ಮನ್, ಬೌಲರ್ ಹಾಗೂ ಫೀಲ್ಡರ್ ಪ್ರಶಸ್ತಿಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.
ಕೊಪ್ಪಳ ಕ್ರಿಕೆಟ್ ಕ್ಲಬ್ ತರಬೇತಿದಾರ ಫೈರೋಜ್ ಅಲಿ, ಖಲೀಲ್ ಪಟೇಲ್, ಕೆಪಿಟಿಸಿಎಲ್ ನೌಕರ ರಾಘವೇಂದ್ರ ಬಡಿಗೇರ, ಸಹಾಯಕ ತರಬೇತಿದಾರ ದರ್ಶನ, ಪಾಲಕ ಮುದಿಯಪ್ಪ ಇತರರಿದ್ದರು.