ಗಂಗಾವತಿ ತಾಲೂಕಿನ ದಾಸನಾಳದಲ್ಲಿ ಮುಷ್ಕರದ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮುಷ್ಕರದ ಕರಪತ್ರಗಳನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ ಬೆಣ್ಣಕಲ್, ತಾಲೂಕು ಕಾರ್ಯದರ್ಶಿ ಮುತ್ತಣ್ಣ ದಾಸನಾಳ ಇತರರಿದ್ದರು. 
ಕೊಪ್ಪಳ

ಕಾರ್ಮಿಕರ ಹಕ್ಕುಗಳಿಗಾಗಿ ಸಾರ್ವತ್ರಿಕ ಮುಷ್ಕರ 12ಕ್ಕೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾಹಿತಿ
ಗಂಗಾವತಿ: ಕಾರ್ಮಿಕರ ಹಕ್ಕುಗಳಿಗಾಗಿ ೆ.12ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹೇಳಿದರು.
ತಾಲೂಕಿನ ದಾಸನಾಳದಲ್ಲಿ ಮುಷ್ಕರದ ಭಾಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾರ್ಮಿಕರ ಹಿತಾಸಕ್ತಿ ಕಡೆಗಣಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ಬಿಸಿಯೂಟ ನೌಕರರನ್ನು ಸಕ್ರಮಗೊಳಿಸುವ ಬಗ್ಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನರೇಗಾ ಯೋಜನೆಯಡಿ 200 ಮಾನವ ದಿನಗಳ ಸೃಷ್ಟಿ ಜತೆಗೆ 700ರೂ. ಕೂಲಿ ನಿಗದಿಪಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಯಥಾವತ್ ಜಾರಿ ಜತೆಗೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದ ಶ್ರೀಮಂತರಿಗೆ ಸಬ್ಸಿಡಿ ನೀಡುವ ಸರ್ಕಾರ ಕಾರ್ಮಿಕರು ಮತ್ತು ರೈತರಿಗೆ ದಂಡ, ಜೈಲು, ಸಂಬಳ ಕಡಿತದಂತಹ ಕಾನೂನು ಜಾರಿಗೊಳಿಸುತ್ತಿದೆ ಎಂದು ದೂರಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ ಬೆಣ್ಣಕಲ್ ಮಾತನಾಡಿ, ಹೋರಾಟದ ಮೂಲಕ ಕಾರ್ಮಿಕರ ಉದ್ಯೋಗ ಭದ್ರತೆ ಉಳಿಸಿಕೊಳ್ಳಲು ಸಾಧ್ಯವಾಗಿದ್ದು, ಸಾರ್ವತ್ರಿಕ ಮುಷ್ಕರದ ಯಶಸ್ಸಿಗೆ ಪ್ರತಿಯೊಬ್ಬ ಕಾರ್ಮಿಕರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಅಕ್ಷರ ದಾಸೋಹ ಯೋಜನೆ ರಾಜ್ಯಾಧ್ಯಕ್ಷೆ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರತಿನಿಧಿ ದುರುಗಮ್ಮ, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಮುತ್ತಣ್ಣ ದಾಸನಾಳ, ಪದಾಧಿಕಾರಿಗಳಾದ ಲಿಂಗಪ್ಪ, ದುರುಗಪ್ಪ, ಗಾದೆಪ್ಪ ಇತರರಿದ್ದರು.