ಕುಕನೂರು ಪ್ರವಾಸಿ ಮಂದಿರದಲ್ಲಿ ಪಪಂ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಲೀಲಾವತಿ ಮುಧೋಳ, ಮುಖ್ಯಾಧಿಕಾರಿ ನಾಗೇಶ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯರಾದ ಗುದ್ನೇಪ್ಪ ನೋಟಗಾರ, ರಾಧಾ ದೊಡ್ಡಮನಿ ಇತರರಿದ್ದರು.
- ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆ
- ಅಸ್ವಚ್ಛ ಚರಂಡಿ-ಬಾರದ ನೀರಿಗೆ ಆಕ್ರೋಶ
ಕುಕನೂರು: ಚರಂಡಿಗಳು ಭರ್ತಿಯಾಗಿ ಗಬ್ಬು ನಾರುತ್ತಿವೆ. ಕುಡಿಯಲು ನೀರು ಬರುತ್ತಿಲ್ಲವೆಂದು ವಾರ್ಡ್ ಜನರು ಮನೆಗೆ ಬಂದು ದೂರುತ್ತಿದ್ದಾರೆ. ನಾವೇನು ಮನೆಯಲ್ಲಿ ಇರಬೇಕಾ ಬೇಡ್ವ ನೀವೇ ಹೇಳಿ ಎಂದು 13ನೇ ವಾರ್ಡ್ ಬಿಜೆಪಿ ಸದಸ್ಯೆ ಲಕ್ಷ್ಮೀ ಸಬರದ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅರ್ಧ ಅವಧಿ ಪೂರ್ಣಗೊಂಡಿದ್ದು, ನಾವು ಕುಡಿವ ನೀರು, ಚರಂಡಿ ಸ್ವಚ್ಛತೆ ಬಿಟ್ಟು ಏನೂ ಕೇಳಿಲ್ಲ. ಚರಂಡಿ ತುಂಬಿದರೆ ನಿವಾಸಿಗಳು ನಮ್ಮನ್ನು ಪ್ರಶ್ನಿಸುತ್ತಾರೆ. ನಾವು ತೆಗೆಯಬೇಕಾ?. ಕಾರ್ಮಿಕರ ಕೊರತೆ ಇದ್ದರೆ ಮತ್ತಷ್ಟು ಜನರನ್ನು ಕೆಲಸಕ್ಕೆ ಸೇರಿಸಿ. ಅದನ್ನು ಬಿಟ್ಟು ಸುಳ್ಳು ಹೇಳುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಪಂ ಸದಸ್ಯ ಸಿರಾಜ್ ಕರಮುಡಿ ಮಾತನಾಡಿ, ಜನರಿಗೆ ಕುಡಿವ ನೀರು, ಬೆಳಕು ಮತ್ತು ಸ್ವಚ್ಛತೆ ಈ ಮೂತನ್ನು ತಪ್ಪದೇ ಕಲ್ಪಿಸಿ. ದಯಾಮಾಡಿ ಪಂಚಾಯಿತಿ ತೆರಿಗೆ ಹೆಚ್ಚಿಸಬೇಡಿ ಎಂದರು.
ಅಮೃತ 2.0 ಕುಡಿವ ನೀರಿನ ಎಇಇ ಸುಕುಮುನಿ ನಾಯಕ ಮಾತನಾಡಿ, ಅಮೃತ 2.0 ಕುಡಿವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ 3 ಟ್ಯಾಂಕ್ ನಿರ್ಮಿಸಲಾಗುತ್ತಿದೆ. ತುಂಗಭದ್ರಾ ಜಲಾಯಶದಿಂದ ಭಾನಾಪುರ, ಕೌಶಲ ಕೇಂದ್ರ, ಇಂಜಿನಿಯರಿಂಗ್ ಕಾಲೇಜು, ತಳಬಾಳ ಕಾಲೇಜು, ಕುಕನೂರು ಮತ್ತು ಯಲಬುರ್ಗಾ ಪಟ್ಟಣಗಳಿಗೆ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. 15 ತಿಂಗಳಿಂದ ಕೆಲಸ ಪ್ರಗತಿಯಲ್ಲಿದ್ದು, ಜುಲೈನಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಟ್ಟಣದಲ್ಲಿ ಕುಡಿವ ನೀರು, ಚರಂಡಿ ಸ್ವಚ್ಛತೆ ಬಗ್ಗೆ ಪೌರಕಾರ್ಮಿಕರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ತೆರವುಗೊಳಿಸಲು ಬೀದಿ ಬದಿ ವ್ಯಾಪಾರಿಗಳು ಸಮಯ ಕೇಳಿದ್ದರು. ಸೋಮವಾರದ ಒಳಗೆ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ಸರ್ಕಾರ ತೆರಿಗೆ ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದು, ಶೇ.3 ಏರಿಸಲಾಗುವುದು ಎಂದರು.
ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸದಸ್ಯರಾದ ಗುದ್ನೇಪ್ಪ ನೋಟಗಾರ, ರಾಧಾ ದೊಡ್ಡಮನಿ, ಲಲಿತಮ್ಮ ಯಡಿಯಾಪೂರ, ಪ್ರಶಾಂತ ಆರುಬೆಳಿನ, ಮಂಜುನಾಥ ಕೋಳೂರು, ನೂರುದ್ದೀನ್‌ಸಾಬ್ ಗುಡಿಹಿಂದಲ್, ನಾಮನಿರ್ದೇಶಿತ ಸದಸ್ಯರಾದ ರಫೀ ಹಿರೇಹಾಳ, ಶರಣಯ್ಯ, ಈರಣ್ಣ ಯಲಬುರ್ಗಿ, ಎಇ ವೀರೇಶ ಬೇಲಿ, ಕೆಇಬಿ ಸೆಕ್ಷನ್ ಅಧಿಕಾರಿ ವೀರೇಶ ಇತರರಿದ್ದರು.
ಮಾಹಿತಿ ನೀಡ್ಲಿಲ್ಲವೆಂದು ಸಭೆ ಬಹಿಷ್ಕಾರ
ನಾವು ಕೇಳಿದ ಮಾಹಿತಿ ನೀಡುತ್ತಿಲ್ಲ. ಹೇಳಿದ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲವೆಂದು ಆರೋಪಿಸಿ ಬಿಜೆಪಿ ಬೆಂಬಲಿತ ಪಪಂ ಸದಸ್ಯರು ಮುಖ್ಯಾಧಿಕಾರಿ ನಾಗೇಶಗೆ ಪತ್ರ ಬರೆದು ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರ ನಡೆದರು. ನಂತರ ಸದಸ್ಯರನ್ನು ಸಮಾಧಾನಪಡಿಸಿ ಸಭೆಗೆ ಕರೆತಂದ ಮುಖ್ಯಾಧಿಕಾರಿ, ಸಮಸ್ಯೆ ಕುರಿತು ಚರ್ಚಿಸಿದರು.