ಗಂಗಾವತಿ ಆನೆಗೊಂದಿ ರಸ್ತೆಯ ಉದ್ಯಾನದ ದುಸ್ಥಿತಿ. 
ಕೊಪ್ಪಳ

ತ್ಯಾಜ್ಯ ಸಂಗ್ರಹ ಕೇಂದ್ರಗಳಾದ ಪಾರ್ಕ್‌ಗಳು

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಲೆಕ್ಕದಲ್ಲಿ 118 ಕಾಣಸಿಗುವುದು 13 ಮಾತ್ರ
  • ಅಧಿಕಾರಿಗಳ ಅಸಡ್ಡೆ-ಜನರ ಅಸಹಕಾರ
ಗಂಗಾವತಿ: ಸಿಬ್ಬಂದಿ ಮತ್ತು ನಿರ್ವಹಣೆ ಕೊರತೆಯಿಂದ ನಗರದ ಪ್ರಮುಖ ಕಾಲನಿಗಳಲ್ಲಿರುವ ಉದ್ಯಾನಗಳು ಹಾಳಾಗಿದ್ದು, ತ್ಯಾಜ್ಯ ಸಂಗ್ರಹ ಕೇಂದ್ರಗಳಾಗಿ ಮಾರ್ಪಡುತ್ತಿವೆ.
35 ವಾರ್ಡ್‌ಗಳಲ್ಲಿ 13 ಉದ್ಯಾನಗಳು ಅಸ್ತಿತ್ವದಲ್ಲಿದ್ದು, ಬಹುತೇಕ ಉದ್ಯಾನ ಜಾಗ ಒತ್ತುವರಿಯಾಗಿದೆ. ಕಳೆದ 10ವರ್ಷಗಳ ಅವಧಿಯಲ್ಲಿ ಅಮೃತಸಿಟಿ ಮತ್ತು ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಂಡ ಉದ್ಯಾನಗಳು ಆರಂಭದಲ್ಲಿ ಸುಸ್ಥಿತಿಯಲ್ಲಿದ್ದರೂ, ನಿರ್ವಹಣೆ ವೈಲ್ಯ ಮತ್ತು ಜನರ ಅಸಹಕಾರದಿಂದ ಬಹುತೇಕ ಉದ್ಯಾನ ಅವಸಾನದ ಅಂಚಿನಲ್ಲಿವೆ. ಹೊಸ ಬಡಾವಣೆಗಳಲ್ಲಿನ ಉದ್ಯಾನದ ಜಾಗ ನಗರಸಭೆ ಸುಪರ್ದಿಗೆ ಪಡೆದರೂ ಇನ್ನೂ ಸುಧಾರಣೆಯಾಗಿಲ್ಲ. ಮರಗಳು ಬೆಳೆಯುವ ಜಾಗದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅಭಿವೃದ್ಧಿಯಾದ ಪಾರ್ಕ್‌ಗಳಲ್ಲಿನ ಆಟಿಕೆ ಸಲಕರಣೆಗಳಲ್ಲಿ ಕೆಲವು ಹಾಳಾಗಿದ್ದರೆ, ಇನ್ನೂ ಕೆಲವು ಗುಜರಿ ಪಾಲಾಗಿವೆ. ಪ್ರವೇಶ ದ್ವಾರದ ಗೇಟ್ ಮುರಿದಿದ್ದರೆ, ರಕ್ಷಣಾ ಗೋಡೆಗಳಿಗೂ ಕನ್ನ ಬಿದ್ದಿದೆ.
ಅನೈತಿಕ ಚಟುವಟಿಕೆ ತಾಣ
ನಗರ ಬಸ್ ನಿಲ್ದಾಣ ಬಳಿಯ ನೆಹರು ಮತ್ತು ಪಂಪಾನಗರದ ಮಕ್ಕಳ ಪಾರ್ಕ್ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದರೆ, ವಾಕಿಂಗ್ ಟ್ರ್ಯಾಕ್ ನೆಲಹಾಸು ಕಿತ್ತಿಹೋಗುತ್ತಿವೆ. ಹುಲ್ಲು ಹಾಸು ಮತ್ತು ಮರಗಳು ನೀರು ಕಾಣದೇ ಎಷ್ಟೋ ತಿಂಗಳುಗಳಾಗಿವೆ. 35ನೇ ವಾರ್ಡ್ ಮಹಾಬಲೇಶ್ವರ ಲೇಔಟ್‌ನಲ್ಲಿರುವ ಪಾರ್ಕ್‌ನಲ್ಲಿ ಕಸದ ರಾಶಿ ತುಂಬಿದ್ದು, ವಿಷ ಜಂತುಗಳ ವಾಸಸ್ಥಾನವಾಗಿದೆ. ಆಸನಗಳು ಜನರ ಪಾಲಾಗಿದ್ದರೆ, ರಕ್ಷಕರಿಲ್ಲದಿದ್ದರಿಂದ ಉದ್ಯಾನಗಳು ಹಂದಿಗಳ ವಾಸ ಸ್ಥಾನವಾಗಿವೆ. ಎಲ್ಲೆಂದರಲ್ಲಿ ಸಿರಿಂಜ್, ಸಿಗರೇಟ್ ತುಂಡುಗಳು, ಮದ್ಯದ ಖಾಲಿ ಬಾಟಲಿ ತುಂಬಿಕೊಂಡಿದ್ದು, ಗುಟ್ಖಾ ಬಳಕೆಯಿಂದ ಕೆಂಪುಮಯವಾಗಿದೆ. ಕೆಲವೆಡೆ ಒತ್ತುವರಿಯಾಗಿದ್ದರೆ, ಇನ್ನೂ ಕೆಲವೆಡೆ ಚರಂಡಿ ನೀರು ಉದ್ಯಾನದತ್ತ ಬಿಡಲಾಗುತ್ತಿದೆ.

ಸಿಬ್ಬಂದಿ ಕೊರತೆ

ಹಲವು ವರ್ಷಗಳಿಂದ ಉದ್ಯಾನ ನಿರ್ವಹಣೆಗೆ ಕಾಯಂ ಮಾಲಿಗಳಿಲ್ಲ. ಇದ್ದ ಇಬ್ಬರು ಮಾಲಿಗಳು ಬೇರೆ ಕೆಲಸಗಳಿಗೆ ನಿಯೋಜಿಸಲಾಗಿದೆ. ಇನ್ನೂ ಹೊರಗುತ್ತಿಗೆ ಆಧಾರದಡಿ ಯಾವುದೇ ಮಾಲಿಗಳನ್ನು ನಿಯೋಜಿಸಿಲ್ಲ. ಇಂಜಿನಿಯರ್‌ಗಳ ಕೊರತೆಯಿದ್ದು, ಸದ್ಯಕ್ಕಿರುವ ಇಬ್ಬರು ಎಇಗಳು ಮೂರ‌್ನಾಲ್ಕು ವಿಭಾಗಳನ್ನು ನೋಡಿಕೊಳ್ಳುವ ಸ್ಥಿತಿ ಬಂದಿದೆ. ಕಳೆದ ವರ್ಷದಿಂದ ಎಇಇ ಹುದ್ದೆ ಪ್ರಭಾರದಲ್ಲಿದ್ದು, ಕಾಯಂ ಇಂಜಿನಿಯರ್ ನೇಮಕವಾಗುತ್ತಿಲ್ಲ. ಒಬ್ಬರೇ ಪರಿಸರ ಇಂಜಿನಿಯರ್ ಉದ್ಯಾನ, ಘನತ್ಯಾಜ್ಯ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಘಟಕ ನೋಡಿಕೊಳ್ಳಬೇಕಿದ್ದು, ಉದ್ಯಾನದತ್ತ ಗಮನಹರಿಸಲು ಪುರಸೋತ್ತಿಲ್ಲ. ಅಮೃತಸಿಟಿ ಯೋಜನೆಯಡಿ ಉದ್ಯಾನ ನಿರ್ವಹಣೆಗೆ ಹೊರಗುತ್ತಿಗೆ ಆಧಾರದಡಿ 10 ಸಿಬ್ಬಂದಿ ನಿಯೋಜಿಸಿದರೂ, ನಿರ್ವಹಣೆ ಹಳಿಗೆ ಬರುತ್ತಿಲ್ಲ. ಜನರ ಅಸಹಕಾರವೂ ಉದ್ಯಾನ ಅಧ್ವಾನಕ್ಕೆ ಕಾರಣವಾಗಿದೆ.

ದಾಖಲೆಯಲ್ಲಿದ್ದಷ್ಟು ನೋಡಲಿಕ್ಕಿಲ್ಲ

2000ರಿಂದ ಅಸ್ತಿತ್ವಕ್ಕೆ ಬಂದ ನಗರಸಭೆ ಕಡತದಲ್ಲಿ ನಗರದ 35 ವಾರ್ಡ್‌ಗಳಲ್ಲಿ 118 ಉದ್ಯಾನಗಳಿರುವ ದಾಖಲೆಗಳಿವೆ. ಆದರೆ ಕಣ್ಣಿಗೆ ಕಾಣುತ್ತಿರುವುದು 13, ನಿರ್ವಹಣೆಯಲ್ಲಿರುವುದು 10. ಲೆಕ್ಕದಲ್ಲಿದ್ದಷ್ಟು ನೋಡಲು ಉದ್ಯಾನ ಸಿಗುತ್ತಿಲ್ಲ. ಇನ್ನೂ ಇದ್ದ ಉದ್ಯಾನಗಳನ್ನು ನಿರ್ವಹಿಸಲು ಅಧಿಕಾರಿಗಳಲ್ಲಿ ಆಸಕ್ತಿಯಿಲ್ಲ, ಜನರಿಗೆ ಬೇಕಿಲ್ಲ. ಪ್ರಭಾವಿಗಳೇ ಉದ್ಯಾನ ಜಾಗ ಒತ್ತುವರಿ ಮಾಡಿಕೊಂಡಿದ್ದು, ಸಾರ್ವಜನಿಕರ ದೂರುಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬಡ ಮತ್ತು ನಿರಾಶ್ರಿತರ ವಿಶ್ರಾಂತಿ ಧಾಮವಾಗಿರುವ ಪಾರ್ಕ್‌ಗಳ ನಿರ್ವಹಣೆಗೆ ಜನ ಆಸಕ್ತಿವಹಿಸಬೇಕಿದೆ.
ದತ್ತು ಪಡೆಯಲಿ: ಪರಿಸರ ರಕ್ಷಣೆ, ಪ್ಲಾಸ್ಟಿಕ್ ನಿಷೇಧ ಮತ್ತು ಸಾರ್ವತ್ರಿಕ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ಸಂಘಟನೆಗಳು ಉದ್ಯಾನ ದತ್ತು ಪಡೆದು ನಿರ್ವಹಣೆಗೆ ಮುಂದಾಗಲಿ. ನಗರದಲ್ಲಿ 10ಕ್ಕೂ ಹೆಚ್ಚು ಕನ್ನಡ ಪರ ರಾಜ್ಯ ಸಂಘಟನೆಗಳಿದ್ದು, ನಗರಸಭೆ ಅಭಿವೃದ್ಧಿಗೊಳಿಸಿದ ಉದ್ಯಾನಗಳನ್ನು ದತ್ತು ಪಡೆದು ಕಾವಲು ಪಡೆಯತ್ತ ಗಮಹರಿಸಲಿ. ನಿರ್ವಹಣೆಗೆ ನಗರಸಭೆಯತ್ತ ಬೊಟ್ಟು ಮಾಡುವ ಬದಲು ವಾರ್ಡ್‌ಗಳಲ್ಲಿನ ವಾಯು ವಿಹಾರಿಗಳು ಕೂಟ ರಚಿಸಿಕೊಂಡು ಉದ್ಯಾನ ಅಂದಕ್ಕೆ ವಾಸ್ತವ ಸ್ವರೂಪ ನೀಡುವುದು ಒಳಿತು ಎನ್ನುತ್ತಾರೆ ಹಿರಿಯರು.
"

ಉದ್ಯಾನ ನಿರ್ವಹಣೆಗೆ ಅಮೃತಸಿಟಿ ಯೋಜನೆಯಡಿ ಸಿಬ್ಬಂದಿ ನಿಯೋಜಿಸಿಕೊಂಡಿದ್ದು, ಮಾರ್ಗದರ್ಶನ ನೀಡಲಾಗುತ್ತಿದೆ. ಉದ್ಯಾನ ದತ್ತು ನೀಡಲು ಯೋಚಿಸಿದ್ದು, ಸಂಘಟನೆಗಳು ಮುಂದಾಗಬೇಕಿದೆ.

"

ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದ್ದು, ಆಟಿಕೆ ಸಲಕರಣೆಗಳು ಕಳ್ಳರ ಪಾಲಾಗುತ್ತಿವೆ. ಪ್ರತಿಯೊಂದು ಉದ್ಯಾನಕ್ಕೆ ರಕ್ಷಣಾ ಸಿಬ್ಬಂದಿ ನಿಯೋಜಿಸಬೇಕಿದೆ.