- ಬಾಕಿ ತಾಲೂಕು ಕಡೆಗಣೆನೆಗೆ ಆಕ್ರೋಶ
ಕೊಪ್ಪಳ: ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳ ಪಟ್ಟಿ ಘೋಷಿಸಿದ್ದು, ಜಿಲ್ಲೆಯಲ್ಲಿ ಮೂರು ತಾಲೂಕು ತೀವ್ರ ಬರಪೀಡಿತವೆಂದು ತಿಳಿಸಿದೆ. ಬಾಕಿ ನಾಲ್ಕು ತಾಲೂಕುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆಯಂತೆ ಆಗಿಲ್ಲ. ಪರಿಣಾಮ ಬಹುತೇಕ ತಾಲೂಕುಗಳು ಬರ ಪೀಡಿತವಾಗಿವೆ. ರೈತರು, ಸಂಟನೆಗಳು ನಿರಂತರ ಹೋರಾಟ ನಡೆಸಿ ಬರ ಘೋಷಣೆಗೆ ಆಗ್ರಹಿಸಿವೆ. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೂ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಿದ್ದರು. ಇದೀಗ ಸರ್ಕಾರ ಗಂಗಾವತಿ, ಕುಕನೂರು, ಕನಕಗಿರಿ ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ.
ಜಿಲ್ಲಾ ಕೇಂದ್ರ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಕಾರಟಗಿ ತಾಲೂಕುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಎಡದಂಡೆ ನಾಲೆಗೆ ನೀರು ಬಿಟ್ಟಿದ್ದು ಕಾರಟಗಿ ತಾಲೂಕಿನ ರೈತರಿಗೆ ಅನುಕೂಲವಾಗಿದೆ. ಆದರೆ, ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಮಳೆ ಕೊರತೆ ಇದ್ದು, ಬರ ಆವರಿಸಿದೆ. ಹೀಗಿದ್ದರೂ ಬರಪಟ್ಟಿಯಿಂದ ಈ ತಾಲೂಕುಗಳನ್ನು ಕೈ ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಹಾಗೂ ಸಾಮಾನ್ಯ ಬರ ಪಟ್ಟಿಯಲ್ಲೂ ತಾಲೂಕುಗಳು ಸ್ಥಾನ ಪಡೆಯದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಸಂಪೂರ್ಣ ಬರ ಆವರಿಸಿದೆ. ಸರ್ಕಾರ ಅವೈಜ್ಞಾನಿಕ ಸಮೀಕ್ಷೆ ನಡೆಸುವ ಮೂಲಕ ಮೂರು ತಾಲೂಕುಗಳನ್ನ ಕಡೆಗಣಿಸಿದೆ. ಗಂಗಾವತಿ, ಕುಕನೂರು ಮತ್ತು ಕನಕಗಿರಿ ತಾಲೂಕುಗಳನ್ನು ತೀವ್ರ ಬರಪೀಡಿತವೆಂದು ಪರಿಗಣಿಸಿರುವುದು ಸ್ವಾಗತಾರ್ಹ. ಗಂಭೀರ ಮಳೆ ಕೊರತೆ ಮತ್ತು ಬೆಳೆ ಹಾನಿ ಎದುರಿಸುತ್ತಿರುವ ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸಂಪೂರ್ಣ ಅವೈಜ್ಞಾನಿಕ, ತಾರತಮ್ಯಪೂರ್ಣ ಮತ್ತು ರೈತವಿರೋಧಿ ಕ್ರಮ.
— ನವೀನ್ ಗುಳಗಣ್ಣವರ. ಬಿಜೆಪಿ ಜಿಲ್ಲಾಧ್ಯಕ್ಷ ಕೊಪ್ಪಳ.