ರಾಜ್ಯ ಸರ್ಕಾರ ತನ್ನ ಆವರ್ತನಿಧಿಯಿಂದ ತೊಗರಿಗೆ ನಾಲ್ಕು ಸಾವಿರ ರೂ. ಬೆಂಬಲ ಬೆಲೆ ನೀಡಿ ಖರೀದಿಸಲು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಹುಲಿಹೈದರ, ತಾಲೂಕು ಅಧ್ಯಕ್ಷ ಭೀಮನಗೌಡ ಗುಡುದೂರು, ಶಿವಕುಮಾರ, ಸಣ್ಣ ಶೇಖರಪ್ಪ, ಸೋಮನಾಥ ನಾಯಕ ಇತರರಿದ್ದರು
- ಕನಕಗಿರಿಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಆಗ್ರಹ
- ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ
ಕನಕಗಿರಿ: ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಎಂಟು ಸಾವಿರ ರೂ. ಎಂಎಸ್‌ಪಿ ಘೋಷಿಸಿದ್ದು, ರಾಜ್ಯ ಸರ್ಕಾರವು ತನ್ನ ಪಾಲಿನ ಬೆಲೆಯನ್ನು ಘೋಷಿಸಲಿ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ತಾಲೂಕು ಘಟಕದಿಂದ ಪಟ್ಟಣದಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಹುಲಿಹೈದರ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿನ ರೈತರು ತೊಗರಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಲ್ಲವಾಗಿದ್ದು, ಇದರಿಂದ ವೆಚ್ಚ ಸರಿದೂಗಿಸುವುದು ಕಷ್ಟವಾಗಿದೆ. ಈಗಾಗಲೇ ಬಹುತೇಕ ರೈತರ ತೊಗರಿ ಫಸಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹಲವು ದಿನಗಳ ಬೇಡಿಕೆಯಂತೆ ಖರೀದಿ ಕೇಂದ್ರ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರ ಘೋಷಿಸಿರುವ ಎಂಟು ಸಾವಿರ ರೂ. ಎಂಎಸ್‌ಪಿ ದರ ರೈತರಿಗೆ ಸಾಕಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಕ್ವಿಂಟಾಲ್‌ಗೆ ತನ್ನ ಆವರ್ತನಿಧಿಯಿಂದ ನಾಲ್ಕು ಸಾವಿರ ರೂ. ಸಹಾಯಧನ ನೀಡಿ ತೊಗರಿ ಖರೀದಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ ಗುಡುದೂರು, ಶಿವಕುಮಾರ, ಸಣ್ಣ ಶೇಖರಪ್ಪ, ಸೋಮನಾಥ ನಾಯಕ, ಹನುಮಣ್ಣ ಬೇವಿನಗಿಡ ಇತರರಿದ್ದರು.