ಕಾರಟಗಿ ಪುರಸಭೆಯಲ್ಲಿ ಸ್ಥಾಯಿಸಮಿತಿ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸದಸ್ಯರು ನಾಮನಿರ್ದೇಶನ ಅರ್ಜಿ ಸಲ್ಲಿಸಿದರು. ಅಧ್ಯಕ್ಷ ಮಂಜುನಾಥ ಮೇಗೂರು, ಉಪಾಧ್ಯಕ್ಷೆ ಸುಜಾತಾ ನಾಗರಾಜ, ವ್ಯವಸ್ಥಾಪಕ ಪರಮೇಶ್ವರಪ್ಪ ಇದ್ದರು.
- ಸ್ಥಾಯಿ ಸಮಿತಿ ರಚನೆಗಾಗಿ ಕರೆದಿದ್ದ ಮೀಟಿಂಗ್‌ಗೆ ಮೆಂಬರ್ಸ್ ಗೈರು
ಕಾರಟಗಿ: ಪುರಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಗಾಗಿ ಗುರುವಾರ ಕರೆದಿದ್ದ ಚುನಾವಣಾ ಸಭೆ ಒಬ್ಬ ಸದಸ್ಯ ಗೈರಾಗಿದ್ದರಿಂದ ಗೊಂದಲ ಉಂಟಾಗಿ ರದ್ದಾಯಿತು.
ಪುರಸಭೆ ಸಭಾಂಗಣದಲ್ಲಿ ಮಧ್ಯಾಹ್ನ 12ಗಂಟೆಗೆ ಅಧ್ಯಕ್ಷ ಮಂಜುನಾಥ ಮೇಗೂರು ನೇತೃತ್ವದಲ್ಲಿ ಆರಂಭಗೊಂಡ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಹಿರೇಬಸಪ್ಪ ಸಜ್ಜನ್ ಹೊರತುಪಡಿಸಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 22 ಸದಸ್ಯರು ಹಾಜರಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಕಾಂಗ್ರೆಸ್‌ನ ದೊಡ್ಡಬಸವರಾಜ ಬೂದಿ, ಸುರೇಶ ಯಲ್ಲಪ್ಪ ಸೇರಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡ ಬಿಜೆಪಿ ಸದಸ್ಯರಾದ ಸುಪ್ರಿಯಾ ಅರಳಿ, ಜಿ.ಅರುಣಾದೇವಿ ಹಾಗೂ ಬಿಜೆಪಿಯಿಂದ ರಾಜಶೇಖರ ಸಿರಿಗೇರಿ, ಬಸವರಾಜ ಕೊಪ್ಪದ, ಪಕೀರಪ್ಪ ನಾಯಕ ನಾಮನಿರ್ದೇಶನ ಅರ್ಜಿ ಸಲ್ಲಿಸಿದರು.
ಅರ್ಜಿ ಹಿಂಪಡೆಯುವಿಕೆಗೆ ಅವಧಿ ಬಾಕಿಯಿದ್ದಾಗಲೇ ಕಾಂಗ್ರೆಸ್‌ನ ಸುರೇಶ ಯಲ್ಲಪ್ಪ ಅವರಿಗೆ ಅನುಮೋದಕರಾಗಿದ್ದ ಹಿರೇಬಸಪ್ಪ ಸಜ್ಜನ್ ಸಭೆಯಲ್ಲಿ ಗೈರಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಅನುಮೋದಕರು ಸಹಿ ಮಾಡಿದ್ದರೂ ಸಭೆಗೆ ಗೈರಾಗಿದ್ದರಿಂದ ಅರ್ಜಿ ತಿರಸ್ಕರಿಸಬೇಕು ಎಂದು ರಾಜಶೇಖರ ಸಿರಿಗೇರಿ, ಸೋಮಶೇಖರ ಭೇರಿಗಿ, ಕೆ.ಎಚ್.ಸಂಗನಗೌಡ ಒತ್ತಾಯಿಸಿದರು. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಅರ್ಜಿ ತಿರಸ್ಕೃತವಾದರೆ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲವಾಗಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದು ಅಧಿಕಾರ ಗದ್ದುಗೆ ತಪ್ಪುವ ಆತಂಕ ಎದುರಾಗಿದೆ. ಇದರಿಂದ ಅಧ್ಯಕ್ಷ ಮಂಜುನಾಥ ಮೇಗೂರು ಕಳವಳಗೊಂಡರು. ಯಾವುದೇ ಕಾರಣ ನೀಡದೆ ಸಭೆ ಮುಂದೂಡಿರುವುದಾಗಿ ಘೋಷಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಸೂಕ್ತ ಕಾರಣ ನೀಡದೆ ಸಭೆ ಮುಂದೂಡುತ್ತಿರುವುದು ಸರಿಯಲ್ಲ. ಕೂಡಲೇ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಪಟ್ಟು ಹಿಡಿದರು. ಆದರೆ, ಇದನ್ನು ಪರಿಗಣಿಸದೇ ಅಧ್ಯಕ್ಷ ಮೇಗೂರು ಸಭೆಯಿಂದ ಏಕಾಏಕಿ ಹೊರ ನಡೆದರು.
ಸ್ಥಾಯಿಸಮಿತಿ ರಚನೆಯಾಗಿ ಅಧ್ಯಕ್ಷರಾಗುವ ವಿಶ್ವಾಸದಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಮುಂಚಿತವಾಗಿಯೇ ಹೂವಿನ ಮಾಲೆ ಹಾಗೂ ಸ್ವೀಟ್ ತರಿಸಿದ್ದರು. ಆದರೆ, ಕಾಂಗ್ರೆಸ್‌ನ ಆಂತರಿಕ ಬೇಗುದಿಯಿಂದ ಗೊಂದಲ ಉಂಟಾಗಿ ಸಭೆ ರದ್ದಾಗುವಂತೆ ಮಾಡಿದೆ. ಈಗಾಗಲೇ ಕನಕಗಿರಿ ಪಪಂನಲ್ಲಿ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದ್ದು, ಕಾರಟಗಿ ಪುರಸಭೆಯಲ್ಲೂ ತೆರೆಮರೆಯ ಅಸಮಾಧಾನ ಭುಗಿಲೇಳುತ್ತಿವೆ. ಹೀಗಾಗಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಒಳಮುನಿಸು ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಕಾರಣ ನೀಡದೆ ಸಭೆ ಮುಂದೂಡಿರುವ ಅಧ್ಯಕ್ಷರು, ಸದಸ್ಯರು ಪುರಸಭೆ ನಿಯಮಗಳಿಗೆ ಅಗೌರವ ತಂದಿದ್ದಾರೆ. ಇದು ಸರಿಯಲ್ಲ.