ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ಪಪಂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ ಉದ್ಘಾಟಿಸಿದರು. ಮಾಜಿ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಶರಣೇಗೌಡ ಇತರರಿದ್ದರು.
- ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಸಲಹೆ
- ಕನಕಗಿರಿ ಪದಗ್ರಹಣ ಕಾರ್ಯಕ್ರಮ
ಕನಕಗಿರಿ: ಪಕ್ಷ ಬೇಧ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನಕಗಿರಿ ಪಟ್ಟಣದ ಅಭಿವೃದ್ಧಿಗೆ ಪಪಂ ಅಧ್ಯಕ್ಷರು ಮುಂದಾಗಬೇಕು ಎಂದು ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಹೇಳಿದರು.
ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರ ಸಿಕ್ಕಾಗ ಅಭಿವೃದ್ಧಿಗೆ ಶ್ರಮಿಸಬೇಕು. ನಿಮ್ಮ ಕೆಲಸಗಳನ್ನು ಶಾಶ್ವತವಾಗಿ ಜನರು ನೆನಪಿನಲ್ಲಿಡುತ್ತಾರೆ. ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಹಾಗೂ ಮುಖಂಡರ ಸಹಕರಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಮಾತನಾಡಿ, ಪ್ರಭಾವಿಗಳ ಹಾಗೂ ಮುಖಂಡರ ದಾಖಲೆಗಳನ್ನು ಅಧಿಕಾರಿಗಳು ಶೀಘ್ರ ವಿಲೇ ಮಾಡುತ್ತಾರೆ. ಆದರೆ, ಜನಸಾಮಾನ್ಯರನ್ನು ಅಲೆದಾಡಿಸುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಬೇಕು ಎಂದು ತಿಳಿಸಿದರು. ಅಧ್ಯಕ್ಷೆ ತನುಶ್ರೀ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.
ತಾಪಂ ಅಧ್ಯಕ್ಷ ಬಸವಂತಗೌಡ, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಪಪಂ ಮಾಜಿ ಅಧ್ಯಕ್ಷೆ ಹುಸೇನ್‌ಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ಹುಸೇನ್‌ಬೀ, ರಾಜಾಸಾಬ್ ನಂದಾಪುರ, ನಂದಿನಿ, ಹನುಮಂತ ಬಸರಿಗಿಡ, ಸಿದ್ದೇಶ ಕಲುಬಾಗಿಲಮಠ, ರಾಕೇಶ ಕಂಪ್ಲಿ, ನೂರ್‌ಸಾಬ್ ಗಡ್ಡಿಗಾಲ, ಶೇಷಪ್ಪ ಪೂಜಾರ ಇತರರಿದ್ದರು.
ಕಚೇರಿಯಲ್ಲಿ ಫೈಲ್ ಮಾಯ, ಗುಡುಗಿದ ಸದಸ್ಯ: 10ನೇ ವಾರ್ಡ್ ಸದಸ್ಯ ಸಂಗಪ್ಪ ಸಜ್ಜನ್ ಮಾತನಾಡಿ, ಪಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕೆಲಸದಲ್ಲಿ ಕಾಳಜಿ ತೋರುತ್ತಿಲ್ಲ. ಸಾರ್ವಜನಿಕರ ಆಸ್ತಿಗಳ ದಾಖಲೆಗಳ ಫೈಲ್‌ಗಳೇ ಕಚೇರಿಯಿಂದ ಮಾಯಾವಾಗುತ್ತಿವೆ ಎಂದು ಗುಡುಗಿದರು. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು.
ಪರಸ್ಪರ ಟಾಂಗ್: ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಅಧಿಕಾರ ಹಂಚಿಕೆ ಮಾಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ನಮ್ಮ ಸರ್ಕಾರದಲ್ಲಿ ಭೂಮಿ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮುಂದಾಗಿದ್ದೇವು. ಆದರೆ, ಕರೊನಾ ಅಡ್ಡಿಯಾಯಿತು ಎಂದರು. ಬ್ಲಾಕ್ ಕಾಂಗ್ರೆಸ್ ಗಂಗಾಧರ ಸ್ವಾಮಿ ಕಲುಬಾಗಿಲಮಠ ಮಾತನಾಡಿ, ಒಂದೇ ಸರ್ಕಾರದಲ್ಲಿ ಮೂರ‌್ನಾಲ್ಕು ಮುಖ್ಯಮಂತ್ರಿಗಳಾದ ಉದಾಹರಣೆಗಳಿವೆ. ಅಭಿವೃದ್ಧಿ ಯಾರೇ ಇದ್ದರೂ ಆಗುತ್ತದೆ ಎಂದು ಟಾಂಗ್ ನೀಡಿದರು.