ಕೊಪ್ಪಳದಲ್ಲಿ ವಿವಿಧ ಹೋಟೆಲ್ಗಳಿಗೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು ವಶ ಪಡೆದ ಆಹಾರ ಪದಾರ್ಥ.
ಕೊಪ್ಪಳ: ನಗರದಲ್ಲಿ ಗುರುವಾರ ಹೋಟೆಲ್ಗಳ ಮೇಲೆ ಧಿಡೀರ್ ದಾಳಿ ನಡೆಸಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಸುರತ ಆಹಾರ ಪದಾರ್ಥ ವಶಕ್ಕೆ ಪಡೆದು ನೋಟಿಸ್ ಜಾರಿಗೊಳಿಸಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಬೆಳಗ್ಗೆಯೇ ಅಧಿಕಾರಿಗಳ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬೆನ್ನೆಲ್ಲೇ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ನಗರದ ಪ್ರತಿಷ್ಠಿತ ಪ್ರಮುಖ ಹೋಟೆಲ್ಗಳಿಗೆ ತೆರಳಿ ತಪಾಸಣೆ ನಡೆಸಿದರು. ಮಾಲತೇಶ, ಅಕ್ಷಯ, ಉಡುಪಿ ಉಪಾಹಾರ, ಸಂಧ್ಯಾ ರೆಸ್ಟೋರೆಂಟ್, ಶೋಭಾಸ್, ಜೆಕೆಎಸ್, ಹಂಪಿ ಎಕ್ಸಪ್ರೆಸ್ ಹೋಟೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರ ಪದಾರ್ಥ, ಬಳಸುವ ವಸ್ತುಗಳು, ಪ್ರಮಾಣಿತ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ, ಅಡುಗೆ ಮನೆ ನಿರ್ವಹಣೆ ಇತ್ಯಾದಿ ಅಂಶಗಳನ್ನು ಗಮನಿಸಿದರು.
ಈ ವೇಳೆ ಕೆಲವೆಡೆ ಅಸುರತ ಆಹಾರ ಪದಾರ್ಥ, ಲೇಬಲ್ ಇಲ್ಲದ ಆಹಾರ, ಚಿಕನ್, ಮಟನ್, ಅವಧಿ ಮುಗಿದ ಪದಾರ್ಥಗಳು ಕಂಡುಬಂದಿವೆ. 14 ಕೆಜಿ ಚಿಕನ್, 2 ಕೆಜಿ ಮೀನು, 8 ಕೆಜಿ ಪನ್ನೀರ್, ಮೀರಿಂಡಾ, ಪೆಪ್ಸಿ, 36ಬಾಟಲ್ ಸೆವೆಲ್ಅಪ್, 4 ಪ್ಯಾಕೆಟ್ ಬ್ರೂ ಕಾಫಿ ಪುಡಿ, 800 ಎಂಎಲ್ ಸಲಾಡ್ ಎಣ್ಣೆ, 3 ಕೆಜಿ ಗೋಬಿ, 1 ಕೆಜಿ ಫಿಜ್ಜಾ ಬ್ರೇಡ್, 4 ಕೆಜಿ ಉಪ್ಪಿನಕಾಯಿ ವಶಪಡಿಸಿಕೊಳ್ಳಲಾಯಿತು. ಕೂಡಲೇ ಎಲ್ಲ ಆಹಾರ ಮಾದರಿಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಯಿತು. ದಾಳಿ ನಡೆಸಿದ ಹೋಟೆಲ್ಗಳಿಗೆ ನೋಟಿಸ್ ನೀಡಲಾಗಿದೆ.