ಗಂಗಾವತಿ ಎಚ್.ಆರ್.ಸರೋಜಮ್ಮ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಾಗಾರವನ್ನು ಜೆಎಂಎ್ಸಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೋಶನಿ ಪಾಟೀಲ್ ಉದ್ಘಾಟಿಸಿದರು. ಸಂಘದ ತಾಲೂಕು ಅಧ್ಯಕ್ಷ ಶರಣಬಸಪ್ಪ ನಾಯಕ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಪ್ರಾಚಾರ್ಯ ಡಾ.ಎನ್.ರವಿ ಚವ್ಹಾಣ ಇತರರಿದ್ದರು.
ಗಂಗಾವತಿ: ಕಾನೂನಿನ ಅರಿವು ಮುಖ್ಯವಾಗಿದ್ದು, ವಿದ್ಯಾರ್ಥಿನಿಯರು ಸಂವಿಧಾನಾತ್ಮಕ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಜೆಎಂಎ್ಸಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೋಶನಿ ಪಾಟೀಲ್ ಹೇಳಿದರು.
ಎಚ್.ಆರ್.ಸರೋಜಮ್ಮ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಕಾನೂನು ಪಾಲನೆ ಮಾಡಬೇಕು. ಮಕ್ಕಳು ಉನ್ನತ ಶಿಕ್ಷಣದತ್ತ ಗಮನಹರಿಸಬೇಕು. ಸೈಬರ್ ಸುರಕ್ಷತೆ, ಮಹಿಳಾ ರಕ್ಷಣೆ, ಬಾಲ್ಯವಿವಾಹ ನಿಷೇಧ, ಪೋಸ್ಕೋ ಮತ್ತು ಶಿಕ್ಷಣ ಹಕ್ಕುಗಳ ಬಗ್ಗೆ ಕನಿಷ್ಟ ಮಾಹಿತಿ ತಿಳಿಯಬೇಕು ಎಂದರು.
ಪ್ರಾಚಾರ್ಯ ಡಾ.ಎನ್.ರವಿ ಚವ್ಹಾಣ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಜತೆಗೆ ಕಾನೂನಿನ ಮೂಲ ಅರಿವು ಮುಖ್ಯ. ಕಾನೂನು ತಿಳಿವಳಿಕೆಯಿಂದ ಆತ್ಮವಿಶ್ವಾಸ ಬೆಳೆಸಲಿದ್ದು, ಉತ್ತಮ ಭವಿಷ್ಯ ರೂಪಿಸಲಿದೆ ಎಂದು ತಿಳಿಸಿದರು. ಮಾದಕ ವ್ಯಸನ, ಪೋಕ್ಸೋ ಕಾಯ್ದೆ ಕುರಿತು ವಕೀಲೆ ಪವಿತ್ರಾ ಮುದ್ಗಲ್ ಉಪನ್ಯಾಸ ನೀಡಿದರು.
ಸಂಘದ ತಾಲೂಕಾಧ್ಯಕ್ಷ ಶರಣಬಸಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ ಎಂ.ಕುಸಬಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಸದಸ್ಯೆ ಉಮಾ, ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಹನುಮಂತ ವಡ್ಡರ್, ಉಪನ್ಯಾಸಕರಾದ ಕೆ.ಎಚ್.ಕೊಳ್ಳಣ್ಣನವರ್, ಭೀಮೇಶ, ಸುವರ್ಣಲತಾ, ಬಸವರಾಜ ಇತರರಿದ್ದರು.