ಹಳೇ ಬಂಡಿ ಹರ್ಲಾಪುರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲಾವರಣದ ಧ್ವಜ ಕಟ್ಟೆ ದ್ವಂಸಗೊಳಿಸಿರುವ ಕಿಡಿಗೇಡಿಗಳು ಕಟ್ಟೆ ಪಕ್ಕದಲ್ಲಿ ಮದ್ಯಪಾನ ಸೇವಿಸಿ ಬಾಟಲ್-ಪೌಚ್‌ಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು.
- ಕಿಡಿಗೇಡಿಗಳಿಂದ ಧ್ವಜ ಕಟ್ಟೆ ದ್ವಂಸ
- ಶಾಲಾ ಕೊಠಡಿಯೊಳಗೆ ಕಾಲಿ ಬಾಟಲಿ, ಪೌಚ್‌ಗಳು
ಮುನಿರಾಬಾದ್: ಸಮೀಪದ ಹಳೇ ಬಂಡಿಹರ್ಲಾಪುರ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲಾವರಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಕಿಡಿಗೇಡಿಗಳು ಧ್ವಜ ಕಟ್ಟೆಯನ್ನು ದ್ವಂಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ ವೇಳೆ ಶಾಲಾವರಣ ಪ್ರವೇಶಿಸುವ ಕುಡುಕರು, ಕಿಡಿಗೇಡಿಗಳು ಮದ್ಯ ಸೇವನೆ ಮಾಡಿ ಕಾಲಿ ಬಾಟಲಿ, ಪೌಚ್‌ಗಳನ್ನು ಶಾಲಾ ಕೊಠಡಿಯೊಳಗೆ ಎಸೆದು ಹೋಗುತ್ತಿದ್ದಾರೆ. ನಶೆಯಲ್ಲಿ ತರಗತಿ ಕೊಠಡಿ ಬಾಗಿಲು ಮುರಿಯುವುದು, ಕಿಟಕಿಗಳನ್ನು ನಾಶ ಮಾಡುವುದು ಸಾಮಾನ್ಯವಾಗಿದೆ.
ಶಾಲಾವರಣ ಮತ್ತು ಕೊಠಡಿಗಳಲ್ಲಿ ಗುಟ್ಖಾ ಪ್ಯಾಕೇಟ್‌ಗಳು, ಬೀಡಿ-ಸಿಗರೇಟ್ ತುಂಡುಗಳು ತುಂಬಿರುತ್ತವೆ. ಇದರಿಂದ ಕಲಿಕೆ ವಾತಾವರಣ ಸಂಪೂರ್ಣ ಹಾಳಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಈ ಕೂಡಲೇ ಶಾಲೆಯಲ್ಲಿ ನಡೆಯುತ್ತಿರುವ ಅಹಿತರಕ ಘಟನೆಗಳಿಗೆ ಕಡಿವಾಣ ಹಾಕಿ ಗೌರವ ಕಾಪಾಡಬೇಕು. ರಾತ್ರಿ ವೇಳೆ ಶಾಲೆಗೆ ಸೂಕ್ತ ಭದ್ರತೆ ಒದಗಿಸಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಲಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.