ಗಂಗಾವತಿ ತಾಲೂಕಿನ ಉಡುಮಕಲ್ ಶ್ರೀ ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಕೈಗೆತ್ತಿಕೊಂಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಗುರುವಾರ ಭೂಮಿಪೂಜೆ ನೆರವೇರಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನಪ್ಪ ಮಳಗಿ, ಬಿಜೆಪಿ ಜಿಲ್ಲಾ ಉಸ್ತುವಾರಿ ಸಿಂಗನಾಳ ವಿರೂಪಾಕ್ಷಪ್ಪ, ಉಪಾಧ್ಯಕ್ಷ ಮನೋಹರಗೌಡ ಹೇರೂರು ಇತರರಿದ್ದರು.
- ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ
- 153.76 ಕೋಟಿ ರೂ. ಮಂಜೂರು
ಗಂಗಾವತಿ: ಒಣ ಪ್ರದೇಶವನ್ನು ನೀರಾವರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅನುದಾನ ಮಂಜೂರು ಮಾಡಿಸಿದ್ದು, ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆಯಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಉಡುಮಕಲ್ ಶ್ರೀ ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಕೈಗೆತ್ತಿಕೊಂಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮುತುವರ್ಜಿಯಿಂದ ಕ್ಷೇತ್ರದ 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಸಿಕ್ಕಿದ್ದು, 153.76 ಕೋಟಿ ರೂ. ಮಂಜೂರಾಗಿದೆ. ಜಲಸಂಪನ್ಮೂಲ ಇಲಾಖೆ ನಿರ್ವಹಣೆಯಲ್ಲಿ ಪೈಪ್‌ಲೈನ್ ಕಾಮಗಾರಿ ಶುರುವಾಗಲಿದ್ದು, ಈ ಭಾಗದ ಎಲ್ಲ ಬೋರ್‌ವೆಲ್‌ಗಳು ರಿಚಾರ್ಜ್ ಆಗಲಿವೆ ಎಂದರು.
ಅಂತರ್ಜಲ ವದ್ಧಿ ಜತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾದ ನೀರಿನ ಸೌಲಭ್ಯ ದೊರೆಯಲಿದೆ. ಅದರಂತೆ ಗ್ರಾಮಗಳ ಕುಡಿವ ನೀರಿನ ಯೋಜನೆಗಳಿಗೂ ಸಹಕಾರಿಯಾಗಲಿದ್ದು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಕ್ಷೇತ್ರದಲ್ಲಿ 6 ಕೆಪಿಎಸ್ ಶಾಲೆಗಳಿಗೆ ಮಂಜೂರಾತಿ ಸಿಕ್ಕಿದ್ದು, ಉಡುಮಕಲ್‌ಗೆ ಪಿಯು ಕಾಲೇಜು ಮಂಜೂರಿಗೆ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ನದಿ ತೀರದಲ್ಲಿದ್ದರೂ ಕೆಲ ಗ್ರಾಮಗಳಿಗೆ ಕುಡಿವ ನೀರಿನ ಸಮಸ್ಯೆಯಿದ್ದು, ಈಗಾಗಲೇ ಸಮಗ್ರ ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೆರೆ ಒತ್ತುವರಿ ಸಮಸ್ಯೆಗಳಿದ್ದರೆ, ಗ್ರಾಮಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.
ಸರ್ಕಾರಿ ಪ್ರೌಢ ಶಾಲೆಗೆ ಶಿಕ್ಷಕರ ನೇಮಕ, ಹೆಚ್ಚುವರಿ ಕೊಠಡಿ ನಿರ್ಮಾಣ, ಹಾಸ್ಟೆಲ್‌ಗೆ ಅಗತ್ಯ ಸೌಲಭ್ಯ ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಸ್ಥರು ಶಾಸಕ ಗಾಲಿ ಜನಾರ್ದನರೆಡ್ಡಿ ಮನವಿ ಸಲ್ಲಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನಪ್ಪ ಮಳಗಿ, ಬಿಜೆಪಿ ಜಿಲ್ಲಾ ಉಸ್ತುವಾರಿ ಸಿಂಗನಾಳ ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ ನಾಡಗೇರ್, ಉಪಾಧ್ಯಕ್ಷ ಮನೋಹರಗೌಡ ಹೇರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಪ್ರಮುಖರಾದ ಯಮನೂರು ಚೌಡ್ಕಿ, ಚನ್ನಪ ಮಳಗಿ, ಆನಂದ್ ಗೌಡ, ಚನ್ನವೀರನಗೌಡ, ಶರಣಯ್ಯಸ್ವಾಮಿ ಮರಳೀಮಠ, ಬಸನಗೌಡ, ಹನುಮಗೌಡ ಆಗೋಲಿ, ಜಲಸಂಪನ್ಮೂಲ ಇಲಾಖೆ ಎಇಇ ಪುನೀತ್ ಇತರರಿದ್ದರು.
ಬಯಲು ಪ್ರದೇಶಗಳಿಗೆ ನೀರಾವರಿ ಭಾಗ್ಯ
ಕೊಪ್ಪಳ ತಾಲೂಕಿನ ಚಿಕ್ಕ ಬೊಮ್ಮನಾಳದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಉಡಮಕಲ್, ಆಗೋಲಿ, ಹಂಪಸದುರ್ಗ, ಗಡ್ಡಿ, ಹೇಮಗುಡ್ಡ, ಮಲಕನಮರಡಿ, ಭಟ್ಟರನರಸಾಪುರ, ಚಿಕ್ಕಬೊಮ್ಮನಾಳ, ಚಳ್ಳಾರಿ, ಹೊಸೂರು, ಹಾಸಗಲ್, ಕೊಡದಾಳ, ಹಿರೇಸೂಳಿಕೇರಿ, ದನಕನದೊಡ್ಡಿ-1, ದನಕನದೊಡ್ಡಿ-2, ಹಾಲಹಳ್ಳಿ, ಸಂಗಾಪುರ, ಕಲ್ ತಾವರಗೇರ, ಭೀಮನೂರು, ಕೂಕನಪಳ್ಳಿ, ಇಂದರಗಿ-1, ಇಂದರಗಿ-2, ವನಬಳ್ಳಾರಿ, ಬೂದಗುಂಪ, ಹೊಸಹಳ್ಳಿ, ನಾಗೇಶನಹಳ್ಳಿ, ಜಬ್ಬಲಗುಡ್ಡ ಮತ್ತು ನೀರ್‌ಕೊಳ ಕೆರೆಗಳು ಯೋಜನೆ ವ್ಯಾಪ್ತಿಗೆ ಬರಲಿವೆ. ಇವುಗಳನ್ನು ತುಂಬಿಸುವ ಮೂಲಕ ಮಳೆಯಾಶ್ರಿತ ಪ್ರದೇಶಗಳನ್ನು ನೀರಾವರಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
"
ವೆಂಕಟಗಿರಿ ಭಾಗವನ್ನು ಸಂಪೂರ್ಣ ನೀರಾವರಿಯನ್ನಾಗಿ ಪರಿವರ್ತಿಸುವ ಸಂಕಲ್ಪ ಕೈಗೊಂಡಿದ್ದು, ಮೊದಲ ಹಂತದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಚುನಾವಣೆ ಪೂರ್ವ ನೀಡಿದ ಭರವಸೆಗಳನ್ನು ಅಧಿಕಾರ ಪೂರ್ಣಗೊಳ್ಳುವ ಮೊದಲೇ ಈಡೇರಿಸಲಾಗುವುದು.
— ಗಾಲಿ ಜನಾರ್ದನರೆಡ್ಡಿ, ಶಾಸಕ