ಕನಕಗಿರಿ ಉತ್ಸವ 
ಕೊಪ್ಪಳ

ಉತ್ಸಾಹ ಕಳೆದುಕೊಂಡ ಉತ್ಸವ ?

ಪ್ರಮುಖ ಮುಖ್ಯಾಂಶಗಳು

  • ಈ ವರ್ಷವೂ ಇಲ್ಲ ಸಾಂಸತಿಕ ಹಬ್ಬ
  • ಅಧಿಕಾರದಾಟದಲಿ ತೆರೆಗೆ ಸರಿದ ಸಿದ್ಧತೆ
ಕೊಪ್ಪಳ : ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ಸಂಭವಿಸಿದ್ದು ರಾಜಕೀಯ ಸ್ಥಿತ್ಯಂತರಗಳ ನಡುವೆ ಈ ವರ್ಷವೂ ಕನಕಗಿರಿ, ಆನೆಗೊಂದಿ ಉತ್ಸವ ನಡೆಯುವುದು ಅನುಮಾನ ಮೂಡಿಸಿದೆ. ನಿರಿಕ್ಷೇಯಂತೆ ನಡೆಯಬೇಕಿದ್ದ ಪೂರ್ವಭಾವಿ ಸಭೆ ಅರ್ನಿದಿಷ್ಟ ಅವಧಿಗೆ ಮುಂದೂಡಿದ್ದು, ಸಾಂಸತಿಕ ಚಟುವಟಿಕೆ ಸಡಗರ ಬಹುಪಾಲು ಮುಗಿದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಲ್ಲೆಯ ಸಾಂಸತಿಕ ಪರಂಪರೆ ಪ್ರತಿಕವಾಗಿರುವ ಆನೆಗೊಂದಿ, ಕನಕಗಿರಿ ಉತ್ಸವಗಳು ಇತ್ತೀಚಿನ ವರ್ಷಗಳಲ್ಲಿ ನಿಯಮಿತವಾಗಿ ನಡೆಯುತ್ತಿಲ್ಲ. ಕಳೆದ ವರ್ಷವೂ ಕೆಲವರು ಕನಕಗಿರಿ ಜಾತ್ರೆಯಲ್ಲಿ ಉತ್ಸವ ಆಚರಣೆಗೆ ಒಪ್ಪಲಿಲ್ಲ ಎಂಬ ನೆಪವೊಡ್ಡಿ ದಿನದೂಡಲಾತು. ಆನೆಗೊಂದಿ ಉತ್ಸವಕ್ಕೆ ದಿನಾಂಕ ನಿಗದಿ ಆಗಲೇ ಇಲ್ಲ. ಈ ವರ್ಷವೂ ನಾಡಿನ ಇತರ ಉತ್ಸವಗಳು ಅದ್ದೂರಿಯಾಗಿ ನಡೆದರೂ ಸರ್ಕಾರ ಜಿಲ್ಲೆಯ ಉತ್ಸವಗಳಿಗೆ ಬೇಗ ಅನುದಾನ ಬಿಡುಗಡೆ ಮಾಡಲಿಲ್ಲ.
ಕಳೆದ ತಿಂಗಳು ಕನಕಗಿರಿ ಉತ್ಸವಕ್ಕೆ ಆರು ಕೋಟಿ ರೂ. ನೀಡಿದರೆ, ಆನೆಗೊಂದಿ ಉತ್ಸವಕ್ಕೆ ಮೂರು ಕೋಟಿ ರೂ. ನೀಡಿದೆ. ಮೇ 16 ಮತ್ತು 17ರಂದು ಆಚರಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದ್ದವು. ಕೊನೇ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸಮಯ ಸಿಗಲಿಲ್ಲ ಎಂಬ ಕಾರಣ ನೀಡಿ ತರಾತುರಿಯಲ್ಲಿ ಜೂನ್​ 9 ಮತ್ತು 10ಕ್ಕೆ ಮುಂದೂಡಲಾಗಿದೆ. ವೇದಿಕೆ, ಲಾಂಛನ, ಬ್ಯಾನರ್​, ಆಮಂತ್ರಣ ಪತ್ರಿಕೆ, ಜಾಹಿರಾತು ಲಕಗಳ ಪ್ರದರ್ಶನ, ಗಣ್ಯರು, ಕಲಾವಿದರನ್ನೂ ಆಯ್ಕೆ ಮಾಡಿದ್ದರೂ ಉತ್ಸವ ಆಚರಿಸಲಿಲ್ಲ.
ಇದೀಗ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯಂಥ ಮಹತ್ತರ ಬೆಳವಣಿಗೆ ಟಿಸುತ್ತಿದೆ. ಮತ್ತೊಂದೆಡೆ ಸಚಿವ ಸಂಪುಟ ಪುನಾರಚನೆ ಆಗಲಿದೆ. ಹಲವರು ಸಚಿವ ಸ್ಥಾನ ಕಳೆದುಕೊಂಡರೆ, ಇನ್ನು ಕೆಲವರ ಇಲಾಖೆಗಳ ಬದಲಾವಣೆ ನಡೆಯಲಿದೆ. ಮತ್ತೊಂದೆಡೆ ಮುಂಗಾರು ಮಳೆ ಜೋರಾಗಿದ್ದು ಕೃಷಿ ಚಟುವಟಿಕೆ ಆರಂಭವಾಗಿದೆ. ಜೂನ್​ ಮೊದಲ ವಾರ ಶಾಲೆ, ಕಾಲೇಜುಗಳು ಮರು ಆರಂಭವಾಗುತ್ತಿವೆ. ಜನರೂ ವಿವಿಧ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದು ಈ ಅವಧಿಯಲ್ಲಿ ಉತ್ಸವ ಹಮ್ಮಿಕೊಂಡರೂ ನಿರಿಕ್ಷೇಯಂತೆ ಜನ ಸೇರುವುದೂ ಅನುಮಾನ.

ಎಲ್ಲದರಲ್ಲೂ ಬೇಡ ರಾಜಕಾರಣ

ಆಳುವ ಜನಪ್ರತಿನಿಧಿಗಳು ಸರ್ಕಾರದ ಮೂಗು ಹಿಡಿದು ನಿಗದಿತ ದಿನಾಂಕ ನಿಗದಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಎಲ್ಲದರಲ್ಲೂ ರಾಜಕಾರಣ ಬೆರೆಸುವ ಮೂಲಕ ಆಡಳಿತಾರೂಢ ಪಕ್ಷದ ಪ್ರತಿನಿಧಿ ಇದ್ದರೆ ಮಾತ್ರ ಅದ್ದೂರಿ ಕಾರ್ಯಕ್ರಮಗಳು ಆಗುತ್ತವೆಂಬ ಅಸಂವಿಧಾನಿಕ ಸಂಪ್ರದಾಯಕ್ಕೆ ರಾಜಕೀಯ ನಾಯಕರು ಮುನ್ನುಡಿ ಬರೆಯುತ್ತಿದ್ದಾರೆ. ಮೈಸೂರು ದಸರಾ, ಹಂಪಿ, ಕಿತ್ತೂರು ಉತ್ಸವ ಆಚರಣೆಗೆ ನಿಗದಿತ ದಿನಾಂಕಗಳಿದ್ದು, ರಾಜ್ಯದ ಪರಿಸ್ಥಿತಿ ನೋಡಿಕೊಂಡು ಅದ್ದೂರಿ, ಇಲ್ಲವೆ ಸರಳ ಆಚರಣೆ ಮಾಡಲಾಗುತ್ತಿದೆ. ಅದರಂತೆ ಕನಕಗಿರಿ, ಆನೆಗೊಂದಿ ಉತ್ಸವಕ್ಕೆ ಪ್ರತಿ ವರ್ಷ ನಿಗದಿತ ದಿನಾಂಕ ನಿಗದಿ ಮಾಡಬೇಕೆಂಬುದು ಜನರ ಒತ್ತಾಯ. ಆದರೆ, ಈ ಕಾರ್ಯ ಆಗುತ್ತಿಲ್ಲ. ಪ್ರತಿ ವರ್ಷವೂ ಶಾಸಕರ ಸೂಚನೆ ಮೇರೆಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಅನುದಾನ ಬಿಡುಗಡೆ ಬಳಿಕ ಸಮಯ ನಿಗದಿಪಡಿಸಿ ಆಚರಣೆ ಮಾಡಬೇಕಾದ ಸ್ಥಿತಿ ಇದೆ.
"

ರಾಜ್ಯ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಅನುಸರಿಸುತ್ತಿದೆ. ಆನೆಗೊಂದಿ ಉತ್ಸವಕ್ಕೆ ಮೂರು ಕೋಟಿ ರೂ. ನೀಡಿದ್ದು, ಅಷ್ಟು ಹಣದಲ್ಲಿ ಉತ್ಸವ ಆಚರಿಸಲಾಗದು. ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವ ಶಿವರಾಜ ತಂಗಡಗಿ ಆನೆಗೊಂದಿ ಉತ್ಸವಕ್ಕೆ ನಾನು ಆಸಕ್ತಿ ತೋರಲಿ ಎನ್ನುತ್ತಾರೆ. ನಾನು ಹಲವು ಬಾರಿ ದಿನಾಂಕ ನಿಗದಿಗೆ ಡಿಸಿ ಬಳಿ ಮನವಿ ಮಾಡಿದರೂ ನೀಡಿಲ್ಲ.

— ಗಾಲಿ ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.