ಕೊಪ್ಪಳ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ರಂಜಾನ್​ ಅಂಗವಾಗಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  
ಕೊಪ್ಪಳ

ಕೊಪ್ಪಳದಲ್ಲಿ ಸಂಭ್ರಮದ ರಂಜಾನ್​ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಪರಸ್ಪರ ಶುಭಾಶಯ ಕೋರಿದ ಗಣ್ಯರು
  • ವಿವಿಧೆಡೆ ಸಾಮೂಹಿಕ ಪ್ರಾರ್ಥನೆ
ಕೊಪ್ಪಳ: ನಗರ, ತಾಲೂಕಿನ ಭಾಗ್ಯನಗರ ಪಟ್ಟಣ ಸೇರಿ ವಿವಿಧೆಡೆ ಶನಿವಾರ ಮುಸ್ಲಿಂ ಭಾಂದವರು ಸಡಗರ ಸಂಭ್ರಮದಿಂದ ರಂಜಾನ ಹಬ್ಬ ಆಚರಿಸಿದರು. ಜನಪ್ರತಿನಿಧಿಗಳು, ವಿವಿಧ ಗಣ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು.
ತಿಂಗಳ ಕಾಲ ನಡೆದ ವ್ರತಾಚರಣೆಯಲ್ಲಿ ಭಾಗಿಯಾದವರು ರೋಜಾ ಪೂರ್ಣಗೊಳಿಸಿ ಹಬ್ಬದ ಸಡಗರದಲ್ಲಿ ಭಾಗಿಯಾದರು. ಶುಕ್ರವಾರ ರಾತ್ರಿ ಚಂದ್ರ ದರ್ಶನ ಹಿನ್ನಲೆಯಲ್ಲಿ ಶನಿವಾರ ಹಬ್ಬ ಆಚರಿಸಲಾಯಿತು. ಬೆಳಗ್ಗೆಯೇ ಶುಭ್ರ ಸ್ನಾನಗೈದು, ಈದ್ಗಾ ಮೈದನದಲ್ಲಿ ಒಟ್ಟಾಗಿ ಸೇರಿ ಸಂಪ್ರದಾಯದಂತೆ ನಮಾಜ ಮಾಡಿದರು. ಪರಸ್ಪರರು ಶುಭಾಶಯ ಹಂಚಿಕೊಂಡರು. ಚಿಣ್ಣರು ಹೊಸ ಬಟ್ಟೆ ಸಂಭ್ರಮಿಸಿದರು.
ಹುಲಿಕೆರೆ ಈದ್ಗಾ ಮೈದಾನದಲ್ಲೂ ಪ್ರಾರ್ಥನೆ ನೆರವೇರಿತು. ಮಾಜಿ ಶಾಸಕ ಬಸವರಾಜ ಹಿಟ್ನಾಳ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಹತ್ತಿರದ ಈದ್ಗಾ ಮೈದಾನದಲ್ಲಿನ ಜಮಾಯಿಸಿದ ಸಾವಿರಾರು ಜನರು ಸಾಮೂಹಿಕವಾಗಿ ದೇವರನ್ನು ಸ್ಮರಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್​, ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್​ ಪಟೇಲ್​, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಪ್ರಮುಖರಾದ ಕೆ.ಎಂ.ಸೈಯ್ಯದ್​, ಎಂ.ಕಾಟನ್​ ಪಾಷಾ, ನವೋದಯ ವಿರುಪಣ್ಣ, ಸೋಮಶೇಖರ, ರಾಜಶೇಖರ್​ ಆಡೂರ, ಬಾಷುಸಾಬ್​ ಖತೀಬ, ಅಕ್ಬರ್​ ಪಲ್ಟನ್​, ಅಜೀಂ ಅತ್ತಾರ, ಸಲಾವುದ್ದೀನ ತುರಬಿ, ಇಬ್ರಾಹಿಮ್​ ಅಡ್ಡೇವಾಲೆ ಇತರರಿದ್ದರು.